ಮಡಿಕೇರಿ, ನ. ೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಲ್ಲಿ ಕಳೆದ ೧೯ ತಿಂಗಳ ತಮ್ಮ ಅಧಿಕಾರಾವಧಿಯಲ್ಲಿ ಆಯೋಜಿಸಿದ ಕಾರ್ಯಕ್ರಮಗಳ ಬಗ್ಗೆ ತೃಪ್ತಿ ಇದೆ ಎಂದು ತಿಳಿಸಿರುವ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ಸರ್ಕಾರ ಬದಲಾದಂತೆ ಅಕಾಡೆಮಿಯ ಆಡಳಿತ ಮಂಡಳಿಯ ಅಧಿಕಾರ ಅವಧಿಯೂ ಅಲ್ಪಕಾಲಕ್ಕೆ ಮೊಟಕುಗೊಳ್ಳುವದರಿಂದ ಮಹತ್ವಾಕಾಂಕ್ಷೆಯ ಯೋಜನೆಗಳು ಅಪೂರ್ಣಗೊಳ್ಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಡೆಮಿಯ ಆಡಳಿತ ಮಂಡಳಿಗೆ ಸಾಕಷ್ಟು ಕಾಲಾವಕಾಶ ನೀಡಿದರೆ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಕ್ರಿಯಾಯೋಜನೆ ರೂಪಿಸಲಾಗಿತ್ತ್ತಾದರೂ, ಇದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಇದೀಗ ಹೊಸದಾಗಿ ರಚನೆಗೊಂಡಿರುವ ಆಡಳಿತ ಮಂಡಳಿ ಉಳಿದಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರೆಸುವ ಮೂಲಕ ಅರೆಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಿದ್ದಾರೆ ಎಂದು ಜಯರಾಮ ವಿಶ್ವಾಸ ವ್ಯಕ್ತಪಡಿಸಿದರು.

ಅರೆಭಾಷೆ ಮಾತನಾಡುವವರನ್ನು ಭಾಷೆ ಅಲ್ಪಸಂಖ್ಯಾತರೆAದು ಪರಿಗಣಿಸಬೇಕು ಮತ್ತು ಅರೆಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಅರೆಭಾಷೆಯ ಬೆಳವಣಿಗೆಗೆ ಪೂರಕವಾಗಿ ಸುಮಾರು ೧೦ ಆಯ್ದ ವಿಚಾರಗಳ ಬಗ್ಗೆ ೧೦ ಜನ ವಿದ್ವಾಂಸರ ಮೂಲಕ ಅಧ್ಯಯನ ಪ್ರಬಂಧವನ್ನು ಮಂಡಿಸಲು ಶಿಷ್ಯವೇತನದ ಆಧಾರದಲ್ಲಿ ಅವಕಾಶ ನೀಡಿದ್ದು, ಅಧ್ಯಯನ ಕಾರ್ಯ ಪ್ರಗತಿಯಲ್ಲಿದೆ ಎಂದು ಜಯರಾಮ ಮಾಹಿತಿ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕೆಲವು ತರಗತಿಗಳ ಕನ್ನಡ ಪಠ್ಯದಲ್ಲಿ ಅರೆಭಾಷೆ ಕವನಗಳು ಪ್ರಕಟವಾಗಿದೆ. ಅರೆಭಾಷೆ ಕಥಾ ಸಂಕಲನವಾದ ಬದುಕು, ಕಡ್‌ನ ಮಕ್ಕ, ಸಣ್ಣ ಕತೆಗಳ ನೆಂಪುನ ಜೊಂಪೆ, ಕಥಾ ಸಂಕಲನ ಅಪ್ಪ ಹೇಳ್ದ್ ಹತ್ತ್ ಕತೆಗ ಸೇರಿದಂತೆ ಎಂಟು ಪುಸ್ತಕವನ್ನು ಅಕಾಡೆಮಿ ವತಿಯಿಂದ ಪ್ರಕಟಿಸಲಾಗಿದೆ. ಅಪೂರ್ವ ಸಂಗಮ ಕಥಾ ಸಂಕಲನ, ಪಂಶ್ರೀ ಕಾದಂಬರಿ ಹಾಗೂ ಕಲ್ಯಾಣ ಸ್ವಾಮಿ ಐತಿಹಾಸಿಕ ಕಾದಂಬರಿಗಳು ಮುದ್ರಣಗೊಂಡು ಪ್ರಕಟಣೆಗೆ ಸಿದ್ದವಾಗಿದೆ. ಅರೆಭಾಷೆಯ ತ್ರೆöÊಮಾಸಿಕ ಪತ್ರಿಕೆ ಹಿಂಗಾರದ ಚಂದಾದರರ ಸಂಖ್ಯೆ ಸಾವಿರದ ಗಡಿದಾಟಿದೆ ಎಂದು ಜಯರಾಮ ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸದಸ್ಯರುಗಳಾದ ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿ ಮೋಹನ್, ಕಾನೆಹಿತ್ಲು ಮೊಣ್ಣಪ್ಪ ಹಾಗೂ ಕುಂಬಗೌಡನ ಪ್ರಸನ್ನ ಉಪಸ್ಥಿತರಿದ್ದರು.