ಗೋಣಿಕೊಪ್ಪಲು, ನ. 1: ಚೆನ್ನಯ್ಯನಕೋಟೆ ಗ್ರಾಮ ಎಂದಾಗ ನಮಗೆ ಥಟ್ಟನೆ ಕಣ್ಣಮುಂದೆ ಬರುವದು ದಿಡ್ಡಳ್ಳಿ ಆದಿವಾಸಿಗಳ ವಸತಿಗಾಗಿ ಹೋರಾಟ. ನಂತರ ಹೊರಭಾಗದಿಂದಲೂ ಬಂದು ಕುಟೀರ ಕಟ್ಟಿಕೊಂಡವರ ಕತೆ. ಸುಮಾರು ಒಂದು ವರ್ಷ ಕಾಲ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಸತಿ ರಹಿತರ, ನಿವೇಶನ ರಹಿತರ ಹೋರಾಟ, ಅರಣ್ಯ ಇಲಾಖೆ- ಆದಿವಾಸಿಗಳ ಸಂಘರ್ಷ, ಬೆತ್ತಲೆ ಓಟ ಪ್ರಕರಣ ಸುದ್ದಿಯಾಗಿತ್ತು. ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಭೇಟಿ, ಕೇಂದ್ರದ ತಂಡದ ಭೇಟಿ, ರಾಜ್ಯ ಸಚಿವರ ದಂಡು, ವಿರೋಧ ಪಕ್ಷ ನಾಯಕರ, ಆದಿವಾಸಿ ಸಂಘಟನೆಗಳ ನಿರಂತರ ಭೇಟಿ, ವಿಭಿನ್ನ ಹೇಳಿಕೆಗಳು, ನಕ್ಷಲ್ ಚಟುವಟಿಕೆಯಲ್ಲಿದ್ದವರ ನೆರಳು, ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಶಾಸಕರೂ ಒಳಗೊಂಡಂತೆ ದಿಡ್ಡಳ್ಳಿ ಹೋರಾಟದ ಕಾವು ನಿರಂತರ ಬೆಂಕಿಯ ಜ್ವಾಲೆಯಂತೆ ಹಬ್ಬುತ್ತಲೇ ಹೋಗುತ್ತಿತ್ತು. ಯಾವ ರೀತಿ ತಾರ್ಕಿಕ ಅಂತ್ಯ ಕಾಣಲಿದೆ ಎಂಬ ಬಗ್ಗೆ ಎಲ್ಲರಲ್ಲಿಯೂ ಕೌತುಕ ಮನೆ ಮಾಡಿತ್ತು. ಅಂತೂ ಇಂತೂ 580ಕ್ಕೂ ಅಧಿಕ ವಸತಿ ರಹಿತರ ಹೋರಾಟದಲ್ಲಿ ಸುಮಾರು 526 ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಕೂಡಿಗೆ ಸಮೀಪ ಬ್ಯಾಡಗೊಟ್ಟ ಹಾಗೂ ಕುಶಾಲನಗರ ಸಮೀಪ ಬಸವನಹಳ್ಳಿಯಲ್ಲಿ ಪುನರ್‍ವಸತಿ ಕಲ್ಪಿಸುವ ಮೂಲಕ ದಿಡ್ಡಳ್ಳಿ ಮತ್ತೆ ಶಾಂತ ವಾತಾವರಣಕ್ಕೆ ಮರಳಿತು.

ಆದರೆ, ಅಲ್ಲಿನ ಚೆನ್ನಯ್ಯನ ಕೋಟೆ ಗ್ರಾ.ಪಂ. ಆಡಳಿತಕ್ಕೆ ದಿನನಿತ್ಯ ತಲೆನೋವು ತಲೆದೋರಿತ್ತು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಾಲೂಕು ದಂಡಾಧಿಕಾರಿಗಳು ಜಿ.ಪಂ., ತಾ.ಪಂ. ಆಡಳಿತ, ರಾಜ್ಯ ಕಂದಾಯ ಇಲಾಖಾಧಿಕಾರಿಗಳ ನಿರಂತರ ಭೇಟಿಯಿಂದ ಗ್ರಾಮ ಪಂಚಾಯಿತಿಯಲ್ಲಿ ನಿರಂತರ ಅರ್ಹ ಫಲಾನುಭವಿಗಳ ತಲಾಶೆ ನಡೆದಿತ್ತು.ಇದೀಗ ದಿಡ್ಡಳ್ಳಿ ಹೋರಾಟ ಮುಗಿದು ಎರಡು ವರ್ಷ ಆಗುತ್ತಾ ಬಂದಿದೆ. ಅಲ್ಲಿ ಶಾಂತಿ-ಸಮಾಧಾನ ಕಂಡು ಬಂದಿದೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಇದೀಗ ಅಭಿವೃದ್ಧಿ ಪಥದತ್ತ ಮುಖ ಮಾಡಿರುವದು ಕಂಡುಬಂದಿದೆ. ಸ್ವಚ್ಛ ಗ್ರಾಮದತ್ತ ತನ್ನ ಚಿತ್ತ ನೆಟ್ಟಿದ್ದು ಈ ಬಗ್ಗೆ ‘ಶಕ್ತಿ’ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಇದೀಗ ಬಯಲು ಮುಕ್ತ ಶೌಚಾಲಯದಲ್ಲಿ ಶೇ.100 ಪ್ರಗತಿ ತೋರಿದೆ. ಸಂಪೂರ್ಣವಾಗಿ ಸ್ವಚ್ಛ ಗ್ರಾಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅಲ್ಲಿನ ಗ್ರಾ.ಪಂ. ಜನಪ್ರತಿನಿಧಿಗಳು, ಪಿಡಿಓ ಹಾಗೂ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದು ಮುಂದಿನ ತಿಂಗಳಿನಿಂದ ಒಣ ಕಸ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಮದಲ್ಲಿ ಸಂಪೂರ್ಣ ಫ್ಲಾಸ್ಟಿಕ್ ನಿಷೇಧವಿದ್ದು ಮುಂದೆ ದಂಡ ವಿಧಿಸುವ ಪ್ರಕ್ರಿಯೆಗೂ ಚಾಲನೆ ನೀಡಲಾಗುತ್ತಿದೆ.

ಚೆನ್ನಯ್ಯನಕೋಟೆ, ಚೆನ್ನಂಗಿ ಯಲ್ಲದೆ ದಿಡ್ಡಳ್ಳಿ, ಚೊಟ್ಟೆಪಾರೆ, ಬಸವನಹಳ್ಳಿ, ಕೋಟೆ ಮಂಚಿ, ಚಿಕ್ಕರೇಷ್ಮೆ, ಕೆಸುವಿನ ಹಡ್ಲು, ದೆಯ್ಯದ ಹಡ್ಲು ಪರಿಶಿಷ್ಟ ಜಾತಿ, ಪ.ಪಂಗಡಗಳ ಕಾಲೋನಿಗಳೂ ಉದ್ದೇಶಿತ ಗ್ರಾಮ ಪಂಚಾಯಿತಿಗೆ ಸೇರುತ್ತವೆ. ಸದರಿ ಗ್ರಾ.ಪಂ. ವ್ಯಾಪ್ತಿಯಲ್ಲಿ 6,946 ಜನಸಂಖ್ಯೆ ಇದ್ದು, 4,000ಕ್ಕೂ ಅಧಿಕ ಮತದಾರರಿದ್ದಾರೆ.

ಕಳೆದ 2 ವರ್ಷದಿಂದ ಕೆ.ಸಿ. ಗೀತಾ ಅಧ್ಯಕ್ಷರಾಗಿದ್ದು, ಎನ್.ಜಿ. ಗಾಯತ್ರಿ ಉಪಾಧ್ಯಕ್ಷರಾಗಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ, ಸಾಮಾಜಿಕ ಸ್ಥಾಯಿ ಸಮಿತಿ, ಹಣಕಾಸು ಲೆಕ್ಕಪರಿಶೋಧನೆ ಸಮಿತಿಯನ್ನು ವ್ಯವಸ್ಥಿತವಾಗಿ ರಚಿಸಲಾಗಿದ್ದು ಅಭಿವೃದ್ಧಿ ಹೊಂದುತ್ತಿರುವ ಲಕ್ಷಣಗಳು ಕಂಡು ಬಂದಿವೆ.

ಕಸ ವಿಲೇವಾರಿಗಾಗಿ ಸರ್ವೆ.ನಂ. 45/1ರಲ್ಲಿ 50 ಸೆಂಟ್ ಕಾದಿರಿಸ ಲಾಗಿದ್ದು, ಒಟ್ಟು 9.32 ಎಕರೆ ನಿವೇಶನದಲ್ಲಿ ಗುರುತಿಸಿ, ದುರಸ್ತಿ ಮಾಡುವ ಕೆಲಸ ಬಾಕಿ ಇದೆ.

ಕಸ ವಿಂಗಡಣೆ ಘಟಕ ಸ್ಥಾಪನೆಗೆ ಒಟ್ಟು ರೂ. 15 ಲಕ್ಷ ಮಂಜೂರಾತಿ ದೊರೆತಿದ್ದು, ರೂ. 7.50 ಲಕ್ಷ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ. ರೂ. 4.32 ಲಕ್ಷದ ಮಿನಿ ಟ್ಯಾಕ್ಟರ್ ಖರೀದಿ ಪ್ರಕ್ರಿಯೆ ನಡೆದಿದೆ. ಒಣಕಸ ಘಟಕದ ಕಟ್ಟಡ ಕಾಮಗಾರಿಗೆ ರೂ. 4 ಲಕ್ಷ ವಿನಿಯೋಗಿಸಲಾಗಿದೆ. ಇನ್ನೂ ಯಂತ್ರೋಪಕರಣ ಖರೀದಿಗೆ ರೂ. 1.50 ಲಕ್ಷ ಕಾಯ್ದಿರಿಸಲಾಗಿದೆ. ಕಸ ಸಂಗ್ರಹ ಬ್ಯಾಗ್, ಹಸಿ ಕಸ ವಿಂಗಡಣೆ, ಸಿಸಿ ಕ್ಯಾಮೆರಾ ಅಳವಡಿಕೆ, ತೂಕದ ಯಂತ್ರ ಖರೀದಿಗೆ ರೂ. 8.52 ಲಕ್ಷ ಮೊತ್ತ ಕ್ರಿಯಾ ಯೋಜನೆ ಸಿದ್ಧವಾಗಿದೆ.

ಹೆಚ್ಚೂ ಕಮ್ಮಿ ಚೆನ್ನಯ್ಯನಕೋಟೆ ಗ್ರಾ.ಪಂ.ಯನ್ನು ಕಸ ಮುಕ್ತ ಗ್ರಾಮವನ್ನಾಗಿ ಮಾಡಲು ಪೂರಕ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಧ್ಯಕ್ಷೆ ಕೆ.ಸಿ. ಗೀತಾ ‘ಶಕ್ತಿ’ಗೆ ಮಾಹಿತಿ ನೀಡಿದರು.

2019-20ನೇ ಸಾಲಿಗೆ ಸುಮಾರು ರೂ. 40 ಲಕ್ಷದ ಕ್ರಿಯಾಯೋಜನೆ ಸಿದ್ಧಪಡಿಸಿದ್ದು ವ್ಯವಸ್ಥಿತವಾಗಿ ಅಭಿವೃದ್ಧಿ ಪರ ಕೆಲಸ ಎಲ್ಲರ ಸಹಕಾರದೊಂದಿಗೆ ನಿರ್ವಹಿಸ ಲಾಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್. ರಾಜನ್ ತಿಳಿಸಿದ್ದಾರೆ.

ಆದಾಯ ಮೂಲ: 2019-20ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಗೆ ಅಂಗಡಿ ಮಳಿಗೆಗಳ ಮೂಲಕ ರೂ. 84,600, ಮೀನು ಮಾರಾಟ ಪರವಾನಗಿ ರೂ. 1,32,000, ಕೋಳಿ ಮಾರಾಟ ಲೈಸೆನ್ಸ್ 11 ಮಳಿಗೆಯಿಂದ ರೂ. 1,24,190 ಕ್ರೋಢೀಕರಣ, ನೀರಿನ ತೆರಿಗೆ ರೂ.3,61,800 ಮತ್ತು ಕಂದಾಯ ಬಾಪ್ತು ರೂ. 4,65,163 ಇದ್ದು ವಸೂಲಾತಿಗೆ ರೂ. 4,55,750 ಕರ ಬಾಕಿ ಇದೆ ಎನ್ನಲಾಗಿದೆ.

ಚೆನ್ನಯ್ಯನಕೋಟೆ ಗ್ರಾ.ಪಂ.ಯನ್ನು ಗ್ರೇಡ್-1 ಎಂದು ಗುರುತಿಸಲಾಗಿದ್ದು, ಕಳೆದ ವರ್ಷದ ಉಳಿಕೆ ರೂ. 16,38,267 ಮೊತ್ತವಲ್ಲದೆ, 14ನೇ ಹಣಕಾಸು ಯೋಜನೆಯಡಿ ಈ ಬಾರಿ ರೂ. 22,59,302 ಮೊದಲ ಕಂತು ಬಿಡುಗಡೆಯಾಗಿರುವದಾಗಿ ಅಧ್ಯಕ್ಷೆ ಗೀತಾ ಮಾಹಿತಿ ನೀಡಿದ್ದಾರೆ.

ಶವ ಸಂಸ್ಕಾರಕ್ಕೆ ರೂ. 3 ಸಾವಿರ: ಶೇ. 25 ರ ಅನುದಾನದಲ್ಲಿ ಪರಿಶಿಷ್ಟ ಜಾತಿ, ಪಂಗಡದಲ್ಲಿ ಯಾರಾದರೂ ಸಾವನ್ನಪ್ಪಿದ್ದಲ್ಲಿ ರೂ. 3,000 ನೆರವು ನೀಡಲಾಗುತ್ತಿದೆ. ಸುಮಾರು ರೂ.10 ಲಕ್ಷವನ್ನು ಪ.ಜಾತಿ, ಪ.ಪಂ. ಅಭ್ಯುದಯಕ್ಕೆ ಮೀಸಲಿರಿಸಿದ್ದು ಪುಷ್ಪಾ ಪಿ.ಆರ್. ವಿದ್ಯಾರ್ಥಿನಿಗೆ ಲ್ಯಾಪ್ ಟಾಪ್ ನೀಡಲಾಗಿದೆ. ಸರ್ಕಾರಿ ಶಾಲಾ ಮಕ್ಕಳ ಪ್ರವಾಸಕ್ಕಾಗಿ ರೂ. 10,000 ನೀಡಲಾಗಿದೆ.

ವಸತಿ ರಹಿತರು 20 ಕುಟುಂಬ ಹಾಗೂ ನಿವೇಶನ ರಹಿತರು 378 ಕುಟುಂಬ ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ 600 ನಲ್ಲಿ ಸಂಪರ್ಕವಿದ್ದು, ಯಾವದೇ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳಲಾಗಿಲ್ಲ. ಆನೆ ಉಪಟಳದಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ವಾಹನ ವ್ಯವಸ್ಥೆಗಾಗಿ ಮಾಸಿಕ ರೂ. 5 ಸಾವಿರ ನೀಡಲಾಗುತ್ತಿದೆ. ಮುಂದೆ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಉದ್ದೇಶವೂ ಇದೆ ಎಂದು ಅಧ್ಯಕ್ಷೆ ಅಭಿಪ್ರಾಯಪಟ್ಟಿದ್ದಾರೆ.

ವೈದ್ಯರ-ಬಸ್ ಸಮಸ್ಯೆ: ಚೆನ್ನಯ್ಯನ ಕೋಟೆ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳೂ ಇಲ್ಲದಿಲ್ಲ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಮಾತ್ರ್ರ ಕಾರ್ಯ ನಿರ್ವಹಿಸುತ್ತಿದ್ದು, ವೈದ್ಯರ ಕೊರತೆ ಕಳೆದ ಹಲವು ವರ್ಷಗಳಿಂದ ಇದೆ. ಮಾಲ್ದಾರೆ-ಗುಡ್ಲೂರು-ಮೂಡಬೈಲು-ಚೆನ್ನಂಗಿ ಮಾರ್ಗ ಪಾಲಿಬೆಟ್ಟ ಸಂಪರ್ಕ ಕಲ್ಪಿಸಲು ಬೆಳಿಗ್ಗೆ ಹಾಗೂ ಸಂಜೆ ಸರ್ಕಾರಿ ಬಸ್ ಸೇವೆಯ ಅಗತ್ಯವೂ ಕಂಡು ಬಂದಿದೆ.

ರಸ್ತೆ ಅಭಿವೃದ್ಧಿ ಅಗತ್ಯ: ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 30 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ರಸ್ತೆ, ಚರಂಡಿಗಳು ದುರಸ್ತಿ ಗೊಳಗಾಗಿವೆ. ಹಲವು ಕಡೆಗಳಲ್ಲಿ ಕಾಂಕ್ರಿಟ್ ರಸ್ತೆ ಅಗತ್ಯವೂ ಕಂಡು ಬಂದಿದೆ.

ಪಂಪ್ ಹೌಸ್ ರಿಪೇರಿ, ವಿದ್ಯುತ್ ಶುಲ್ಕ, ಬೀದಿ ದೀಪ ನಿರ್ವಹಣೆ, ಸಿಬ್ಬಂದಿ ವೇತನ ಇತ್ಯಾದಿಗಳಿಗೆ ವಾರ್ಷಿಕ ರೂ.16 ಲಕ್ಷ ಖರ್ಚು ತಗಲುತ್ತಿದೆ. ಸಿಬ್ಬಂದಿ ವೇತನವಾಗಿ ರೂ.6 ಲಕ್ಷ ತಲಾನುದಾನ ಸರ್ಕಾರದಿಂದಲೇ ನೇರ ಪಾವತಿಯಾಗುತ್ತಿದೆ. ಓರ್ವ ಪೌರ ಕಾರ್ಮಿಕ, ನೀರು ನಿರ್ವಾಹಕರು-5, ಸಿಬ್ಬಂದಿಗಳು-6, ಅಟೆಂಡರ್-1 ಹುದ್ದೆಯಲ್ಲಿದ್ದು, ಲೆಕ್ಕ ಸಹಾಯಕರಾಗಿ ಮುತ್ತುರಾಜ್ ಎಂಬವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟು 17 ಮಂದಿ ಗ್ರಾಮ ಪಂಚಾಯಿತಿ ಸದಸ್ಯ ಬಲ ಇದೆ. ಕೆ.ಸಿ. ಗೀತಾ (ಅಧ್ಯಕ್ಷರು), ಎನ್.ಜಿ. ಗಾಯತ್ರಿ (ಉಪಾಧ್ಯಕ್ಷೆ), ಸದಸ್ಯರಾದ ವಿಜು, ರಾಜು, ಶಿಲ್ಪಾ, ಕಾವೇರಿ, ಹೆಚ್.ಎಸ್. ಗಣೇಶ, ಜೆ.ಕೆ. ಅಪ್ಪಾಜಿ, ಕಮಲಮ್ಮ, ಶೀಲಾ, ಕಾಳಮ್ಮ, ಅಯ್ಯಪ್ಪ, ಅರುಣ್‍ಕುಮಾರ್, ರತನ್, ಜಾನಕಿ, ಶಿವಮ್ಮ, ರಾಶೀದ ಹಾಗೂ ಪಿಡಿಓ ಆರ್. ರಾಜನ್ ಅವರ ನಡುವೆ ಉತ್ತಮ ಹೊಂದಾಣಿಕೆ ಹಿನ್ನೆಲೆ ಚೆನ್ನಯ್ಯನಕೋಟೆ ಗ್ರಾಮ ಶೀಘ್ರದಲ್ಲಿ ಸಂಪೂರ್ಣ ಸ್ವಚ್ಛ ಗ್ರಾಮವಾಗಿ, ಮಾದರಿ ಗ್ರಾಮವಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳು ಇದೆ.

- ಟಿ.ಎಲ್.ಶ್ರೀನಿವಾಸ್