ಸಿದ್ದಾಪುರ, ನ. 1 : ಸ್ವಚ್ಛ ಭಾರತದ ಹೆಸರಿನಲ್ಲಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ದಿನನಿತ್ಯ ಸ್ವಚ್ಛಮಾಡಿ ಗ್ರಾಮವನ್ನು ಶುಚಿಯಾಗಿಡುವ ಪೌರ ಕಾರ್ಮಿಕರ ಸೇವೆಗೆ ಸರಿಯಾಗಿ ನ್ಯಾಯಯುತವಾದ ವೇತನ ಹಾಗೂ ಮೂಲ ಸೌಕರ್ಯ ಸಿಗದೇ ಇರುವದು ದುರದೃಷ್ಟಕರ ಎಂದು ಕೊಡಗು ಜಿಲ್ಲಾ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್ ಭರತ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಪಂಚಾಯಿತಿ ನೌಕರರ ದುಡಿಮೆಗೆ ಸರ್ಕಾರಗಳು ನಿಗದಿ ಮಾಡಿರುವ ವೇತನವನ್ನು ಸರಿಯಾಗಿ ನೀಡದೆ ತಿಂಗಳುಗಟ್ಟಲೇ ಬಾಕಿ ಇರಿಸಿಕೊಳ್ಳುತ್ತಿರುವದರಿಂದ ಪಂಚಾಯಿತಿ ನೌಕರರು ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಮಾಡುತ್ತಿರುವ ನೌಕರರಿಗೆ ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುತ್ತಿರುವದು ಸರಿಯಾದ ಕ್ರಮವಲ್ಲ ಎಂದು ದೂರಿದರು. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿಐಡಿ ಸಾಲಪ್ಪ ಅವರ ವರದಿಯಂತೆ ನಗರಾಭಿವೃದ್ಧಿ ಇಲಾಖೆ ಜಾರಿ ಮಾಡಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನೇಮಕ ಮಾಡಿ ಖಾಯಂ ಮಾಡುವ ಕೆಲಸ ಪ್ರಗತಿಯಲ್ಲಿದೆ. ಗ್ರಾಮ ಪಂಚಾಯಿತಿಗಳಲ್ಲಿ ಐದು ಸಾವಿರ ಜನಸಂಖ್ಯೆಗೆ ಒಬ್ಬ ಕಸ ಗುಡಿಸುವವರು ಇರುವದು ಅವೈಜ್ಞಾನಿಕವಾಗಿದ್ದು ಇದು ಅಮಾನವೀಯವಾದುದಾಗಿದೆ. ಈ ಮಾನದಂಡದ ಬದಲಾವಣೆ ಅಗತ್ಯವಾಗಿದ್ದು, ಕಾರ್ಮಿಕರಿಗೆ ಪೆನ್ಶನ್, ಗ್ರ್ಯಾಚುಟಿ ಖಾಯಂ ಮಾಡುವಂತೆ ಹಾಗೂ 25 ವರ್ಷಗಳಿಂದ ದುಡಿಯುತ್ತಿರುವ ಕಸಗುಡಿಸುವವರಿಗೂ ಅನುಮೋದನೆ ಮಾಡಿ ಸರ್ಕಾರ ನೀತಿ ರೂಪಿಸಿ ತಳ ಸಮುದಾಯದ ಜನರಿಗೆ ಮಾನವೀಯ ಬದುಕನ್ನು ನೀಡಲು ಅವಕಾಶ ನೀಡಬೇಕಾಗಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ತಾ. 3 ರಂದು ಬೆಂಗಳೂರು ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಯಲಿದ್ದು, ಜಿಲ್ಲೆಯಿಂದ ನೂರಾರು ಮಂದಿ ಭಾಗವಹಿಸಲಿದ್ದಾರೆ .

ಸಮಾವೇಶದಲ್ಲಿ ಸುಪ್ರೀಂ ಕೋರ್ಟ್‍ನ ವಿಶ್ರಾಂತ ನ್ಯಾಯಾಧೀಶ ವಿ. ಗೋಪಾಲ ಗೌಡ್ರು, ಗ್ರಾಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ನಾಗಾಂಬಿಕಾ ದೇವಿ, ಉಮಾ ಮಹಾದೇವನ್, ಸಾಹಿತಿ ದಲಿತಪರ ಚಿಂತಕ ಡಾ. ಸಿದ್ದಲಿಂಗಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ನೌಕರರ ಸಂಘದ ವೆಂಕಟೇಶ್, ಆಸಿಫ್, ಜಾನಿ ಉಪಸ್ಥಿತರಿದ್ದರು .