ಸಿದ್ದಾಪುರ, ನ. 1: ಅರಣ್ಯದೊಳಗೆ ಹಚ್ಚ ಹಸಿರಿನಿಂದ ಕೂಡಿದ ಹತ್ತಾರು ಏಕರೆ ಗದ್ದೆಗಳು.. ಪ್ರಕೃತಿಯ ನಡುವೆ ಪಾರಂಪರಿಕ ಮಾದರಿಯ ಭತ್ತದ ಕೃಷಿ.. ಇದು ಕಂಡುಬಂದಿರುವದು ಚೆನ್ನಯ್ಯನ ಕೋಟೆ ಗ್ರಾ.ಪಂ. ವ್ಯಾಪ್ತಿಯ ಚೊಟ್ಟಪ್ಪಾರೆ ಹಾಡಿಯಲ್ಲಿ..

ಹೌದು.. ಹತ್ತಾರು ವರ್ಷಗಳಿಂದ ಪಾಳುಬಿಡಲಾಗಿದ್ದ ಗದ್ದೆಗಳು ಇದೀಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಆದಿವಾಸಿಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಅವರನ್ನು ಭೇಟಿಯಾದ ಆದಿವಾಸಿಗಳು ಗದ್ದೆ ಪಾಳುಬಿಟ್ಟಿರುವ ಬಗ್ಗೆ ಗಮನ ಸೆಳೆದರು. ಇದಾದ ಬಳಿಕ ಐ.ಟಿ.ಡಿ.ಪಿ ಅಧಿಕಾರಿ ಶಿವಕುಮಾರ್ ಮುತುವರ್ಜಿ ವಹಿಸಿ, ಆದಿವಾಸಿಗಳು ಭತ್ತದ ಕೃಷಿ ಮಾಡುವಂತೆ ಹುರಿದುಂಬಿಸಿದರು. ಜಿಲ್ಲಾಧಿಕಾರಿಗಳ ಪ್ರೋತ್ಸಾಹದಿಂದ ಆದಿವಾಸಿಗಳು ಸುಮಾರು 30 ಏಕರೆ ಜಾಗದಲ್ಲಿ ಭತ್ತದ ಕೃಷಿಯನ್ನು ಮಾಡಿದ್ದು, ಚೊಟ್ಟಪ್ಪಾರೆ ಹಾಡಿ ಇದೀಗ ಹಚ್ಚಹಸಿರ ಭತ್ತ ಕೃಷಿಯಿಂದ ಕಂಗೊಳಿಸುತ್ತಿದೆ. ಚೊಟ್ಟಪ್ಪಾರೆಯ ಸುಮಾರು 30 ಏಕರೆ ಜಾಗದಲ್ಲಿ ಆದಿವಾಸಿಗಳು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದು, ಕೃಷಿ ಇಲಾಖೆಯ ಮೂಲಕ ಆದಿವಾಸಿಗಳಿಗೆ ಉಚಿತ ಭತ್ತದ ಬೀಜವನ್ನು ವಿತರಿಸಲಾಗಿದೆ. ಮಾತ್ರವಲ್ಲದೇ ಭತ್ತದ ಕೃಷಿಗೆ ಬೇಕಾದ ಯಂತ್ರೋಪಕರಣ ಗಳನ್ನು ಕಡಿಮೆ ಬೆಲೆಗೆ ಒದಗಿಸಲು ಚಿಂತಿಸಲಾಗಿದೆ. ಜಿಲ್ಲಾಧಿಕಾರಿಗಳ ಹಾಗೂ ಇಲಾಖೆಯ ಸಹಕಾರ ದೊಂದಿಗೆ ಆದಿವಾಸಿಗಳು ಇದೀಗ ಭತ್ತದ ಕೃಷಿಯನ್ನು ಆರಂಭಿಸಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ದರಿಂದ ಭತ್ತದ ಕೃಷಿಗೂ ಸಹಕಾರಿಯಾಗಿದೆ.

ವನ್ಯಪ್ರಾಣಿಗಳ ಹಾವಳಿ: ಕಳೆದ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಹಾಗೂ ವನ್ಯ ಪ್ರಾಣಿಗಳ ಹಾವಳಿ ಯಿಂದಾಗಿ ಆದಿವಾಸಿಗಳು ಪಾರಂಪರಿಕ ಕೃಷಿ ಪದ್ಧತಿಯನ್ನು ಕೈಬಿಟ್ಟಿದ್ದರು. ಕಾಡಾನೆ ಸೇರಿದಂತೆ ವನ್ಯ ಪ್ರಾಣಿಗಳು ಭತ್ತದ ಪೈರನ್ನು ನಾಶ ಮಾಡುತ್ತಿತ್ತು. ವನ್ಯ ಪ್ರಾಣಿಗಳ ಹಾವಳಿಯಿಂದ ಪೈರನ್ನು ರಕ್ಷಿಸಲು ಆದಿವಾಸಿಗಳು ಗದ್ದೆಯ ಬಳಿಯಲ್ಲೇ ಅಟ್ಟಣಿ ನಿರ್ಮಿಸಿ, ನಿದ್ರಿಸದೆ ಕಾವಲು ನಿಲ್ಲುತ್ತಿದ್ದರು.

ಈವರೆಗೂ ಸಿಗದ ವಿದ್ಯುತ್ ಸಂಪರ್ಕ: ಚೊಟ್ಟಪ್ಪಾರೆ ಹಾಡಿಯಲ್ಲಿ ಕಳೆದ ಹಲವು ವರ್ಷಗಳ ಹಿಂದೆಯೇ ಕೃಷಿಗಾಗಿ ಕೊಳವೆಬಾವಿ ಕೊರೆಸ ಲಾಗಿದ್ದರೂ, ವರ್ಷಗಳು ಕಳೆದರೂ, ಕೊಳವೆಬಾವಿಗೆ ವಿದ್ಯುತ್ ಸಂಪರ್ಕವೇ ಸಿಗಲಿಲ್ಲ. ಗಂಗಾ ಕಲ್ಯಾಣ ಯೋಜನೆ ಯಲ್ಲಿ ಕೊಳವೆ ಬಾವಿ ಕೊರೆಸ ಲಾಗಿದ್ದರೂ, ವಿದ್ಯುತ್ ಸಂಪರ್ಕವನ್ನು ಸ್ವತಃ ಕೃಷಿಕರೇ ಪಡೆಯಬೇಕೆಂದು ಇಲಾಖೆ ತಿಳಿಸಿದೆ ಎಂದು ಆದಿವಾಸಿಗಳು ದೂರಿದ್ದಾರೆ. ಕೃಷಿ ಮಾಡಿದ ಬಳಿಕ ಬೇಸಿಗೆಯಲ್ಲಿ ನೀರು ಬತ್ತುತ್ತದೆ. ಹಾಗಾಗಿ ಕೃಷಿ ನಾಶವಾಗುವ ಕಾರಣ ಭತ್ತದ ಕೃಷಿಯನ್ನು ನಿಲ್ಲಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದಲ್ಲದೇ ಈವರೆಗೂ ವಿದ್ಯುತ್ ಸಂಪರ್ಕವೇ ನೀಡದ ಮೀಟರ್‍ಗಳಿಗೆ ಸೆಸ್ಕ್ ರೂ. 7 ರಿಂದ 8 ಸಾವಿರ ಬಿಲ್ ನೀಡಲಾಗಿದೆ ಎಂದು ಸ್ಥಳೀಯರಾದ ರಾಜು ಅಳಲನ್ನು ತೋಡಿ ಕೊಂಡಿದ್ದಾರೆ. ಭತ್ತದ ಕೃಷಿಯನ್ನು ಮುಂದುವರೆಸಿ ಕೊಂಡು ಹೋಗಲು ಕೊಳವೆಬಾವಿಗೆ ವಿದ್ಯುತ್ ಸಂಪರ್ಕದ ಅವಶ್ಯಕತೆ ಇದ್ದು, ಕೂಡಲೇ ಸಂಬಂಧಪಟ್ಟ ಇಲಾಖೆ ಕೃಷಿಕರಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಟ್ಟು, ಕೃಷಿಕರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.

- ಎ.ಎನ್. ವಾಸು