ಪೊನ್ನಂಪೇಟೆ, ನ. 1: ಇಲ್ಲಿನ ಸಂತ ಅಂತೋಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಾಲಕರ ಹಾಕಿ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಪೊನ್ನಂಪೇಟೆಯಲ್ಲಿ ವಿದ್ಯಾ ಸಂಸ್ಥೆ ವತಿಯಿಂದ ಮೆರವಣಿಗೆ ಆಯೋಜಿಸಲಾಗಿದೆ.
ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಿ ವಿಜಯ ಸಾಧಿಸಿದ್ದು , ಈ ತಂಡ ಕರ್ನಾಟಕ ರಾಜ್ಯ ತಂಡವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಲಿದೆ.
ಇದೇ ತಿಂಗಳು ಚಂಡಿಗಡದಲ್ಲಿ ನಡೆಯುವ ಪ್ರೌಢಶಾಲಾ ವಿಭಾಗದ ರಾಷ್ಟ್ರ ಮಟ್ಟದ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಇಲ್ಲಿನ ಸಂತ ಅಂತೋಣಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಂಡ ಈ ಹಾಕಿ ತಂಡ ಪಾಲ್ಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆಯ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಬೋಧಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪಟ್ಟಣದಲ್ಲಿ ಸಾರ್ವಜನಿಕ ಮೆರವಣಿಗೆ ಆಯೋಜಿಸಿದೆ. ಇದೇ ವೇಳೆ ಹಾಕಿ ತಂಡದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಬೀಳ್ಕೊಡುಗೆ ನೀಡಲಿದ್ದಾರೆ.
ತಾ.2ರಂದು (ಇಂದು) ಇಲ್ಲಿನ ಹುದಿಕೇರಿ ರಸ್ತೆಯಲ್ಲಿರುವ ಸಂತ ಅಂತೋಣಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಿಂದ ಬೆಳಿಗ್ಗೆ 10.30 ಗಂಟೆಗೆ ಆರಂಭಗೊಳ್ಳುವ ವಿದ್ಯಾರ್ಥಿಗಳ ಅಭಿನಂದನಾ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮತ್ತು ಬಸ್ ನಿಲ್ದಾಣದ ಮೂಲಕ ಸಾಗಿ ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಕೊನೆಯಾಗಲಿದೆ ಎಂದು ವಿದ್ಯಾಸಂಸ್ಥೆಯ ಮುಖ್ಯಸ್ಥ ಫಾದರ್ ಡೇವಿಡ್ ಸಗಯ್ ರಾಜ್ ತಿಳಿಸಿದ್ದಾರೆ.