ಮಡಿಕೇರಿ, ನ.1 : ಕೊಡಗಿನ ಪ್ರವಾಹ ಸಂತ್ರಸ್ತರ ಸಂಕಷ್ಟಗಳಿಗೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರು ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಜೆಡಿಎಸ್ ತೀವ್ರವಾಗಿ ಖಂಡಿಸುವದಾಗಿ ಹೇಳಿದ್ದಾರೆ.ಸದಸ್ಯತ್ವ ಅಭಿಯಾನ ಮತ್ತು ರಾಜ್ಯ ಸರಕಾರದ ನಿರ್ಲಕ್ಷ್ಯದ ವಿರುದ್ಧ ಕೊಡಗು ಜೆಡಿಎಸ್ ಹಮ್ಮಿಕೊಂಡಿರುವ ಅಭಿಯಾನದ (ಮೊದಲ ಪುಟದಿಂದ) ಪಾದಯಾತ್ರೆಗೆ ಕೊಡ್ಲಿಪೇಟೆಯ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಈ ಹಿಂದೆ ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರವಿದ್ದಾಗ ಕೊಡಗಿನ ಮಳೆಹಾನಿ ಸಂತ್ರಸ್ತರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅಗತ್ಯ ಪರಿಹಾರವನ್ನು ನೀಡಲಾಗಿತ್ತು. ನಿರಾಶ್ರಿತರಿಗೆ ಸುಮಾರು 800 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ರೂಪಿಸಲಾಯಿತು. ಆದರೆ ಈಗಿನ ಸರಕಾರ ಸಂತ್ರಸ್ತರ ಯಾವದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಮತ್ತು ಇಲ್ಲಿಯವರೆಗೆ ಸೂಕ್ತ ರೀತಿಯ ಪರಿಹಾರವನ್ನು ವಿತರಿಸಿಲ್ಲವೆಂದು ಆರೋಪಿಸಿದರು. ಎನ್‍ಡಿಆರ್‍ಎಫ್ ನಿಯಮ ದಂತೆ ಪರಿಹಾರ ವಿತರಿಸಲಾಗಿದೆಯೇ ಹೊರತು ಕೊಡಗಿನ ಸಂತ್ರಸ್ತರಿಗೆ ಪ್ರತ್ಯೇಕ ಅನುದಾನವನ್ನೇನು ಮೀಸಲಿಟ್ಟಿಲ್ಲ. ಆದರೆ ಹಿಂದಿನ ಮೈತ್ರಿ ಸರಕಾರ ವಿಶೇಷ ಅನುದಾನವನ್ನು ನೀಡಿತ್ತು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸಂತ್ರಸ್ತರನ್ನು ಕಡೆಗಣಿಸಿರುವ ಸರಕಾರದ ವಿರುದ್ಧ ಕೊಡ್ಲಿ ಪೇಟೆಯಿಂದ ಶನಿವಾರಸಂತೆಯವರೆಗೆ 15 ಕಿ.ಮೀ. ಸಾಂಕೇತಿಕವಾಗಿ ಪ್ರತಿಭಟನಾ ಪಾದ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಸೂಕ್ತ ರೀತಿಯ ಸ್ಪಂದನ ದೊರೆ ಯದಿದ್ದಲ್ಲಿ ನಿರಂತರ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರತಿ ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಾಗುವದು ಎಂದರು. ಮನೆ ಮನೆಗೆ ತೆರಳಿ ಸದಸ್ಯರನ್ನು ಆಯ್ಕೆ ಮಾಡುವದಲ್ಲದೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 14 ತಿಂಗಳ ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವದು ಎಂದು ತಿಳಿಸಿದರು.
ರೈತರ ಸಾಲಮನ್ನಾದಂತಹ ದಿಟ್ಟ ನಿರ್ಧಾರವನ್ನು ಕೈಗೊಂಡ ಕುಮಾರಸ್ವಾಮಿ ಅವರು ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸಂತ್ರಸ್ತರಿಗಾಗಿ ಸುಮಾರು 800 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲದೆ ಎರಡು ನೂತನ ತಾಲೂಕುಗಳನ್ನು ರಚಿಸುವ ಮೂಲಕ ಕೊಡಗಿನ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ರೂಪಿಸಿದ್ದಾರೆ. ಆದರೆ ಈಗಿನ ರಾಜ್ಯ ಸರಕಾರ ಕೇವಲ ಭಾವನಾತ್ಮಕ ವಿಚಾರಗಳಲ್ಲೇ ಕಾಲಹರಣ ಮಾಡುತ್ತಿದ್ದು, ಮಹಾಮಳೆ ಹಾನಿಯಲ್ಲಿ ನೊಂದವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ದರು. ಪಕ್ಷದ ಮಾಜಿ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕೈಬಲ ಪಡಿಸುವ ಕಾರ್ಯವಾದರೆ ಕೊಡಗು ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು. ಸಮಸ್ಯೆಗಳ ಪರಿಹಾರಕ್ಕೆ ಮತ್ತು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಪ್ರಾದೇಶಿಕ ಪಕ್ಷ ಬಲಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪಾದಯಾತ್ರೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್, ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷ, ಖಜಾಂಚಿ ಡೆನ್ನಿ ಬರೋಸ್, ಪ್ರಧಾನ ಕಾರ್ಯದರ್ಶಿ ಸುನೀಲ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಶೇಖರ್, ಹಾಗೂ ಎಲ್ಲಾ ಬೂತ್ ಮಟ್ಟದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೊಡ್ಲಿಪೇಟೆಯಲ್ಲಿ ಆರಂಭವಾದ ಪಾದಯಾತ್ರೆ ಶನಿವಾರಸಂತೆಯ ನಂದೀಶ್ವರ ಮಂಟಪದಲ್ಲಿ ಸಮಾರೋಪಗೊಂಡಿತು.