ಸುಂಟಿಕೊಪ್ಪ, ನ. 1: ಇಂದಿನ ಯುಗದಲ್ಲಿ ಜಾತಿ-ಜಾತಿ,ಮನುಷ್ಯ ಮನುಷ್ಯರ ನಡುವೆ ನಂಬಿಕೆಯಿಲ್ಲ ದಂತಾಗಿ, ಕೊನೆಗೆ ದೇವರ ಮೇಲೆಯೇ ನಂಬಿಕೆ ಕಳೆದುಕೊಂಡು ದೇವಾಲಯ ಗಳಿಗೆ ಸಿಸಿಟಿವಿ ಅಳವಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವದು ವಿಷಾದನೀಯ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್‍ಕುಮಾರ್ ಸಸಿಹಿತ್ಲು ಅಭಿಪ್ರಾಯಿಸಿದ್ದಾರೆ.

ಶ್ರೀನಾರಾಯಣ ಗುರು ಬಿಲ್ಲವ ಸೇವಾ ಸಂಘದ ಸುಂಟಿಕೊಪ್ಪ ಹೋಬಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವ ಹಾಗೂ ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ 8ನೇ ವಾರ್ಷಿಕೋತ್ಸವ ಸಮಾರಂಭ, ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು. ಪ್ರಸ್ತುತ ನಮ್ಮೊಳಗೇ ವಿಭಜನೆ ಯಾಗುತ್ತಿದ್ದೇವೆ, ನಮ್ಮೊಳಗೆ ಏನಾಗುತ್ತಿದೆ ಎಂಬ ಬಗ್ಗೆ ಆರಿವು ಇಲ್ಲವಾಗುತ್ತಿದೆ. ಯುವ ಜನತೆಗೆ ಅವಕಾಶ ಮತ್ತು ಜವಾಬ್ದಾರಿಯನ್ನು ಕೊಡಬೇಕು. ಕ್ರಿಯಾಶೀಲತೆಗೆ ಮತ್ತು ಸೃಜನಶೀಲತೆಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.

ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದ ನಿತಿಶ್‍ಕುಮಾರ್ ಮಾರ್ನಾಡ್ ಒಂದೂವರೆ ಶತಮಾನಗಳ ಹಿಂದೆ ಕೇರಳದಲ್ಲಿ ಮೇಲ್ವರ್ಗದ ಜನರೆದುರು ಬಿಲ್ಲವರು ತಲೆ ತಗ್ಗಿಸಿ ನಿಲ್ಲಬೇಕಾಗಿತ್ತು. ಆದರೆ ಇಂದು ಬಿಲ್ಲವರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬಂದಿದ್ದಾರೆ ಎಂದರು.

ಸಂಘಟನೆಯಲ್ಲಿ ವಯಸ್ಸಿನ ಇತಿಮಿತಿ ಇಲ್ಲ. ಯುವಜನತೆಗೆ ಹೊಣೆಗಾರಿಕೆ ನೀಡಬೇಕು. ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸುವ ಬಗ್ಗೆ ಇನ್ನಷ್ಟು ಸಂಘಟಿತರಾಗುವ ಬಗ್ಗೆ ಚಿಂತಿಸಬೇಕು ಎಂದರು.

ಮಕ್ಕಳು ವಯೋವೃದ್ಧ ತಂದೆ-ತಾಯಿಯವರನ್ನು ವೃದ್ಧಾಶ್ರಮ-ಅನಾಥಶ್ರಮಕ್ಕೆ ಸೇರಿಸದೇ ಜೀವನ ಪರ್ಯಂತ ನೋಡಿಕೊಳ್ಳಬೇಕು, ದೇಶದಲ್ಲಿ ವೃದ್ಧಾಶ್ರಮ-ಅನಾಥಶ್ರಮ ಮುಕ್ತವಾಗಬೇಕು ಎಂದರು.

ಸಮಾರಂಭದ ಉದ್ಘಾಟನೆಯನ್ನು ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯ ಡಾ. ಯಶೋಧರ ಪೂಜಾರಿ ನೆರವೇರಿಸಿ ಮಾತನಾಡಿ ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ಅಗತ್ಯ; ಒಂದೊಮ್ಮೆ ಬಿಲ್ಲವರು ಶೋಚನೀಯ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ನಾರಾಯಣಗುರುಗಳು ಸಂಚಲನ ಮೂಡಿಸಿದರು. ಉನ್ನತ ಶಿಕ್ಷಣದೊಂದಿಗೆ ಉನ್ನತ ಹುದ್ದೆಗೇರಬೇಕು. ಪೋಷಕರು ಮಕ್ಕಳಿಗೆ ಜಾತೀಯ ಆಚಾರ-ವಿಚಾರಗಳನ್ನು ಕಲಿಸಿಕೊಡಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಬಿ.ಎಂ. ಮುಖೇಶ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಪತ್ರಕರ್ತೆ ಶ.ಗ. ನಯನತಾರ, ಸೋಮವಾರಪೇಟೆ ಶ್ರೀ ನಾರಾಯಣ ಗುರು ಸೇವಾ ಸಮಿತಿ ಬಿ.ಎ.ಬಾಸ್ಕರ, ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಬಿ.ಎಂ. ಗಣೇಶ, ಮಡಿಕೇರಿ ತಾಲೂಕು ಸಂಘದ ಅಧ್ಯಕ್ಷ ಬಿ.ಎಸ್. ಲೀಲಾವತಿ ಮಾತನಾಡಿದರು.

ದಿನದ ಅಂಗವಾಗಿ ಶ್ರೀನಾರಾಯಣ ಗುರುಕೋಟಿ ಚೆನ್ನಯ್ಯರ ವೇಷಾಧಾರಿ ಗಳನ್ನೊಳಗೊಂಡ ಮೆರವಣಿಗೆ ನಡೆಯಿತು. ಬಿಲ್ಲವ ವಿದ್ಯಾರ್ಥಿ ಘಟಕದ ಸದಸ್ಯರು ಮೆರವಣಿಗೆ ಯಲ್ಲಿ ಪಾಲ್ಗೊಂಡು ಕನ್ನಡ ವೃತ್ತದಲ್ಲಿ ಮತ್ತು ಕಾರು ನಿಲ್ಧಾಣದ ಬಳಿ ನಾಡು ನುಡಿಯ ಬಗ್ಗೆ ನೃತ್ಯ ಪ್ರದರ್ಶಿಸಿದರು.