ಮಡಿಕೇರಿ, ನ. 1 : ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ಇಂದು ಜರುಗಿದ 64ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅನೇಕ ಹೆತ್ತವರ ಮಡಿಲಲ್ಲಿ ಕಂದಮ್ಮಗಳೊಂದಿಗೆ ವಿವಿಧ ಶಾಲಾ ಪುಟಾಣಿಗಳು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಕರುನಾಡ ಸಿರಿಯ ವೈಭವವನ್ನು ಮೆರೆಯುವದರೊಂದಿಗೆ ಎಲ್ಲರ ಗಮನ ಸೆಳೆದರು.

ಸ್ವತಃ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ತಮ್ಮ ಪುಟಾಣಿ ಅಪೂರ್ವ ಜತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೆ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಣ್ಣೇಕರ್ ಅವರು ಪುಟಾಣಿ ಖುಷಿಯೊಂದಿಗೆ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹಾ ಸಮೃದ್ಧಿ ಜತೆ ಆಗಮಿಸಿ ಗಮನ ಸೆಳೆದರಲ್ಲದೆ, ಪುಟ್ಟ ಮಕ್ಕಳು ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದರು.

ಸಂತ ಮೈಕಲರ ಶಾಲಾ ಮಕ್ಕಳು ಕನ್ನಡದ ಮಾತು ಚೆನ್ನ..., ಕನ್ನಡದ ನೆಲವು ಚೆನ್ನ... ಕನ್ನಡವೇ ಚೆನ್ನ... ಎಂಬ ಗಾಯನಕ್ಕೆ ತಕ್ಕ ರೂಪಕದೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು. ಆದರೆ ನಾಡಧ್ವಜದ ಸಂಕೇತವಾದ ಹಳದಿ, ಕೆಂಪು ಬಣ್ಣವನ್ನು ಕೆಳಗೆ - ಮೇಲೆ ತದ್ವಿರುದ್ಧವಾಗಿ ಧರಿಸಿದ್ದುದು ಕೊಂಚ ಅಭಾಸವೆನಿಸಿತು. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಮಕ್ಕಳು ಕರುನಾಡಿನ ಶರಣ ಪರಂಪರೆಯ ರೂಪಕದೊಂದಿಗೆ ಆಕರ್ಷಿಸಿದರೆ, ಬ್ಲಾಸಂ ಶಾಲಾ ಮಕ್ಕಳು ‘ಪುಣ್ಯಕೋಟಿ’ಯ ರೂಪಕ ಸಹಿತ ಕರುನಾಡಿನ ವೈಭವದೆಡೆಗೆ ಆಕರ್ಷಕ ಕಾರ್ಯಕ್ರಮ ನೀಡಿದರು.

ಇನ್ನೂ ಇಲ್ಲಿನ ಕ್ರೆಸೆÀಂಟ್ ಶಾಲೆಯ ಮಕ್ಕಳು ಕನ್ನಡಾಂಭೆಯ ಕುರಿತು ಸೊಗಸಾದ ಗಾಯನಕ್ಕೆ ತಕ್ಕಂತೆ ಸಾಂಸ್ಕøತಿಕ ಮೆರುಗು ನೀಡಿದ್ದಲ್ಲದೆ, ಈ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಸಹನ ಭುವನೇಶ್ವರಿ ಸ್ವರೂಪವೆತ್ತಂತೆ ನೀಳಕಾಯಳಾಗಿ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದಳು.

ಈ ಎಲ್ಲ ಶಾಲಾ ಮಕ್ಕಳಿಗೆ ಜಿಲ್ಲಾಡಳಿತದಿಂದ ಪ್ರೋತ್ಸಾಹಕರ ಬಹುಮಾನ ನೀಡಿ ಹುರಿದುಂಬಿಸಲಾಯಿತು.

ಸ್ತಬ್ಧಚಿತ್ರ ಮೆರವಣಿಗೆ : ನಗರದ ಗಾಂಧಿ ಮಂಟಪದ ಬಳಿ ಸ್ತಬ್ದಚಿತ್ರ ಮೆರವಣಿಗೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರೋಳಿ, ಪಶುಪಾಲನಾ ಉಪ ನಿರ್ದೇಶಕ ತಮ್ಮಯ್ಯ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಪೌರಾಯುಕ್ತ ಎಂ.ಎಲ್. ರಮೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ. ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಇತರರು ಚಾಲನೆ ನೀಡಿದರು.

ಸಾಧನೆಗೆ ಸಮ್ಮಾನ : ಶೈಕ್ಷಣಿಕವಾಗಿ ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ನಿಡ್ತ ಸರಕಾರಿ ಪ್ರೌಢಶಾಲೆಯ ಹೆಚ್.ಹೆಚ್. ಅಶಿಕಾ, ದ್ವಿತೀಯ ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸಾಧನೆ ತೋರಿರುವ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ. ಕಾಲೇಜಿನ ವಿ.ವಿ. ಅನನ್ಯ, ಪಾಲಿಬೆಟ್ಟ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೆ.ಪಿ. ಸಂಜೀವ ಇವರುಗಳನ್ನು ಗೌರವಿಸಲಾಯಿತು.

ಸ್ಕೌಟ್ಸ್ - ಗೈಡ್ಸ್ ಪ್ರಶಸ್ತಿ : ಸ್ಕೌಟ್ಸ್‍ನಲ್ಲಿ ಉತ್ತಮ ಸೇವೆಗಾಗಿ ಸೋಮವಾರಪೇಟೆ ತಾಲೂಕು ನಲ್ಲೂರು ಸರಕಾರಿ ಶಾಲೆಯ ಶಿಕ್ಷಕ ಚಂದ್ರಶೇಖರ್, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಬಿ. ಉಷಾರಾಣಿ, ಅರಮೇರಿ ಸರಕಾರಿ ಶಾಲೆಯ ಎಂ.ಕೆ. ನಳಿನಾಕ್ಷಿ ಇವರುಗಳನ್ನು ಪುರಸ್ಕರಿಸಲಾಯಿತು.

ಅಂತೆಯೇ ವಿದ್ಯಾರ್ಥಿಗಳಾದ ಬಿಳಿಗೇರಿ ಶಾಲೆಯ ಪ್ರತೀಕ್ಷ, ಸಂತ ಜೋಸೆಫರ ಶಾಲೆಯ ಚೈತನ್ಯ, ಅರಮೇರಿ ಎಸ್.ಎಂ.ಎಸ್. ಶಾಲೆಯ ದಿಲ್ಸನ್ ಹಾಗೂ ಬಿ.ಡಿ. ಬಬಿತ ಮತ್ತು ಕಡಗದಾಳು ಶಾಲೆಯ ದೇವಯ್ಯ ಗೌರವಕ್ಕೆ ಭಾಜನರಾದರು.

ರಾಜ್ಯೋತ್ಸವ ಓಟ : ಅಲ್ಲದೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜರುಗಿದ ಓಟದ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಭುವಿಕ್ ಎಸ್. ಹಾಗೂ ಕೆ.ಟಿ. ನೀತು ಪ್ರಥಮ, ಸಾನಿಷ್ ಎಸ್., ಕುಸುಮ ಹೆಚ್. ದ್ವಿತೀಯ ಬಹುಮಾನ ಪಡೆದರು.

16 ವರ್ಷದೊಳಗೆ ಕೊಡಗು ವಿದ್ಯಾಲಯದ ಟಿ.ಕೆ. ಚೇತನ್ ಹಾಗೂ ಕೆ.ಟಿ. ನೀತು ಪ್ರಥಮ, ಸಹಂ ಎಂ.ಕೆ. ಮತ್ತು ಭೂಶಿಕಾ ಬೋಜಮ್ಮ ದ್ವಿತೀಯ ಬಹುಮಾನ ಗಳಿಸಿದರು.

18 ವರ್ಷದೊಳಗಿನ ಮಕ್ಕಳಲ್ಲಿ ಭುವನ್ ಬೋಪಣ್ಣ ಹಾಗೂ ಎಂ.ಎಂ. ಸ್ನೇಹಾ ಪ್ರಥಮ, ಕೆ.ಡಿ. ಕುಶಾಲಪ್ಪ, ಪ್ರಾಪ್ತಿ ದ್ವಿತೀಯ ಸ್ಥಾನ ಗಳಿಸಿದರು.

ಕಲಾಕೃತಿ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಪ್ರಥಮ, ತಾಲೂಕು ಪಂಚಾಯಿತಿ ದ್ವಿತೀಯ, ಅರಣ್ಯ ಇಲಾಖೆ ತೃತೀಯ ಬಹುಮಾನ ಪಡೆದುಕೊಂಡಿತು.

ಪಥಸಂಚಲನ : ಕನ್ನಡ ರಾಜ್ಯೋತ್ಸವ ಪಥಸಂಚಲನಸವನ್ನು ಜಿಲ್ಲಾ ಪೊಲೀಸ್ ಸಶಸ್ತ್ರದ ಇನ್ಸ್‍ಪೆಕ್ಟರ್ ರಾಚಯ್ಯ ಮುಂದಾಳತ್ವದಲ್ಲಿ ನಡೆಸಲಾಯಿತು. ಡಿ.ಎ.ಆರ್. ತಂಡವನ್ನು ಪ್ರೊಬೆಷನರಿ ಆರ್.ಎಸ್.ಐ. ವಿರೂಪಾಕ್ಷಪ್ಪ, ಸಿವಿಲ್ ಪೊಲೀಸ್ ತಂಡವನ್ನು ಪಿ.ಎಸ್.ಐ. ಶೇಷಾದ್ರಿ ಕುಮಾರ್, ಗೃಹರಕ್ಷಕ ದಳವನ್ನು ಪುಟ್ಟರಾಜು ಮುನ್ನಡೆಸಿದರು. ಪೊಲೀಸ್ ವಾದ್ಯ ತಂಡವನ್ನು ಎ.ಆರ್.ಎಸ್.ಐ. ಸಿದ್ಧೇಶ್ ಮುನ್ನಡೆಸಿದರು.

ಜನರಲ್ ತಿಮ್ಮಯ್ಯ ಶಾಲೆಯ ಎನ್.ಸಿ.ಸಿ. ತಂಡವನ್ನು ವಿದ್ಯಾರ್ಥಿ ಎಂ.ಎಸ್. ಪೃಥಿಶ್, ಸಂತ ಮೈಕಲರ ಶಾಲೆ ಬಾಲಕಿಯರ ತಂಡವನ್ನು ಧೃತಿ ಎ.ಬಿ., ಭಾರತೀಯ ವಿದ್ಯಾಭವನ ಬಾಲಕರ ತಂಡವನ್ನು ಶ್ರೇಯಸ್ ಹಾಗೂ ಬಾಲಕಿಯರ ತಂಡವನ್ನು ಪೂರ್ಣ ಪೊನ್ನಮ್ಮ ನೇತೃತ್ವ ವಹಿಸಿದ್ದರು.

ಸಂತ ಜೋಸೆಫರ ಶಾಲೆ ಎಂ.ಹೆಚ್. ಅನನ್ಯ, ಜೂನಿಯರ್ ಕಾಲೇಜು ಗಗನ್ ದೀಪ್, ಸಂತ ಮೈಕಲರ ಶಾಲೆ ಎನ್‍ಸಿಸಿ ಮಹಮ್ಮದ್ ಅನ್ಸದ್, ಬಾಲಕಿಯರ ಗೈಡ್ಸ್ ಶಾಹಿನಾ ಪಿ.ಎ., ಸೇವಾದಳ ಮಹಮ್ಮದ್ ತಮ್ಮಿಮ್ ನೇತೃತ್ವ ವಹಿಸಿದ್ದರು.

ಗೈಡ್ಸ್ ನೇತೃತ್ವವನ್ನು ಸಂತ ಮೈಕಲರ ಶಾಲೆಯ ಪ್ರಜಕ್ತಾ ಬಿ.ಎ., ಸಂತ ಜೋಸೆಫರ ಶಾಲೆಯ ತಮೀಜ್ಞಾ ಎಂ.ಆರ್., ಸಂತ ಮೈಕಲರ ಶಾಲೆಯ ಪ್ರಾಥಮಿಕ ವಿಭಾಗ ಶಾಹಿನಾ ಪಿ.ಎ., ರಾಜರಾಜೇಶ್ವರಿ ಶಾಲೆಯ ಸ್ಕೌಟ್ಸ್ ತಂಡವನ್ನು ಅಬಿನ್ ಬಿ.ಎಫ್., ಸರಕಾರಿ ಪ್ರೌಢಶಾಲೆ ಸೇವಾದಳವನ್ನು ಕೆ.ಬಿ. ನಿಕ್ಷಿತಾ ಪ್ರತಿನಿಧಿಸಿದರು. ಜಿ.ಎಂ.ಪಿ. ಶಾಲೆ ತಂಡವನ್ನು ಬಿ.ವಿ. ನಂದಿನಿ ನಿರ್ವಹಿಸಿದರು.

ಸಾಂಸ್ಕøತಿಕ ಕಾರ್ಯಕ್ರಮ : ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ಸಂಜೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಿವಿಧ ಶಾಲಾ-ಕಾಲೇಜು ಮಕ್ಕಳು ಹಾಗೂ ಇತರರಿಂದ ಸಾಂಸ್ಕøತಿಕ ಚಟುವಟಿಕೆಗಳು ಜರುಗಿದವು.