ಕರಿಕೆ, ನ. 1: ಭಾಗಮಂಡಲ ವಲಯದ ಕರಿಕೆ ಉಪ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆ ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕರಿಕೆ ಗ್ರಾಮದ ಎಳ್ಳುಕೊಚ್ಚಿ ಮಡೆಕಾನ ನಿವಾಸಿ ರಾಘವ ಮತ್ತು ಇತರರು ಸೇರಿ ಅ. 31ರಂದು ಕಡವೆ ಮರಿವೊಂದನ್ನು ಬೇಟೆಯಾಡಿ ಅದರ ಮಾಂಸವನ್ನು ಕೇರಳ ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡಿದ ಬಗ್ಗೆ ಖಚಿತ ಸುಳಿವಿನ (ಮೊದಲ ಪುಟದಿಂದ) ಮೇರೆಗೆ ದಾಳಿ ನಡೆಸಿದ ಕರಿಕೆ ಅರಣ್ಯ ಸಿಬ್ಬಂದಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅರಣ್ಯ ಮೊಕದ್ದಮೆ ದಾಖಲು ಮಾಡಿ, ಬೇಟೆಯಾಡಿದ ಕಡವೆ ತಲೆ, ಚರ್ಮ ಮತ್ತು ಕಾಲುಗಳು, ಕೃತ್ಯಕ್ಕೆ ಬಳಸಲಾದ ಕೇಬಲ್ ವೈರ್, ಕತ್ತಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆರೋಪಿಯು ನುರಿತ ಬೇಟೆಗಾರನಾಗಿದ್ದು, ಬೇಟೆಯಾಡಿ ಕೇರಳದ ವ್ಯಕ್ತಿಗಳಿಗೆ ಮಾರಾಟ ಮಾಡುವದೇ ಈತನ ಉದ್ಯೋಗವಾಗಿದ್ದು, ಕೇರಳ ಮೂಲದ ವ್ಯಕ್ತಿಯ ಪತ್ತೆಗೆ ಇಲಾಖೆ ಕ್ರಮವಹಿಸಿದೆ. ವಲಯ ಅರಣ್ಯಾಧಿಕಾರಿ ದೇವರಾಜು ಹೆಚ್.ಜಿ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಅರಣ್ಯ ರಕ್ಷಕರಾದ ಸದಾನಂದ, ಉತ್ತಯ್ಯ, ಸಚಿನ್, ವೀಕ್ಷಕರಾದ ಪ್ರವೀಣ, ಚಂದ್ರಶೇಖರ ಮತ್ತು ಭಾಗಮಂಡಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.