ಸೋಮವಾರಪೇಟೆ, ನ. 1: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸ ಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕುಣಿಯೋಣ ಬಾರಾ ಸ್ಪರ್ಧೆ, ರಾಜ್ಯಮಟ್ಟದ ಕಲಾವಿದರಿಂದ ಮೂಡಿಬಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಕರ್ಷಣಿಯವಾಗಿತ್ತು.

ಬೆಳಿಗ್ಗೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಯಿತು. ನಂತರ ಕಕ್ಕೆಹೊಳೆ ಜಂಕ್ಷನ್‍ನಿಂದ ಡೊಳ್ಳುಕುಣಿತ ತಂಡದೊಂದಿಗೆ ಆಟೋಗಳ ಮೆರವಣಿಗೆ ನಡೆಯಿತು. ಇದೇ ಸಂದರ್ಭ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಚೆಲುವ ಕನ್ನಡ ನಾಡು ನಿರ್ಮಿಸಲು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಕವಿಗಳು ಹೋರಾಡಿದ್ದಾರೆ. ಅವರ ತ್ಯಾಗವನ್ನು ನಾವು ಸ್ಮರಿಸಬೇಕು. ನೆಲ, ಜಲ, ಸಂಸ್ಕøತಿಯ ಉಳಿವಿಗಾಗಿ ಪಣತೊಡಬೇಕು. ಕನ್ನಡಕ್ಕಾಗಿ ಒಗ್ಗಟ್ಟಿನ ಹೋರಾಟ ಮಾಡಬೇಕು ಎಂದರು.

ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಕನ್ನಡ ಭಾಷೆಯ ಉಳಿವಿಗೆ ಗೋಕಾಕ್ ಮಾದರಿ ಚಳುವಳಿಯ ಅವಶ್ಯಕತೆ ಯಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿದ್ದರೂ ಇನ್ನೂ ಆಡಳಿತ ಭಾಷೆಯಾಗಿ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿಲ್ಲ. ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಭಾಷೆ ಮೂಲೆಗುಂಪಾಗುತ್ತಿದೆ ಎಂದು ವಿಷಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಆರ್. ಮೋಹನ್ ವಹಿಸಿದ್ದರು.

ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ದಾನಿಗಳಾದ ಡಿ.ಬಿ. ಚಂದ್ರಶೇಖರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್, ಚೌಡ್ಲು ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯ ಯೋಗೇಂದ್ರ, ಮಾಜೀ ಅಧ್ಯಕ್ಷ ಮಂದಣ್ಣ, ಪ.ಪಂ. ಸದಸ್ಯರಾದ ನಳಿನಿ ಗಣೇಶ್, ಶೀಲಾ ಡಿಸೋಜ, ಶುಭಾಕರ್, ಪ್ರಮುಖರಾದ ನಾರಾಯಣಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕುಣಿಯೋಣ ಬಾರಾ-ನೃತ್ಯ ಸ್ಪರ್ಧೆ ಜರುಗಿತು. ಕನ್ನಡ ಗೀತೆಗಳಿಗೆ ವಿದ್ಯಾರ್ಥಿಗಳು ಆಕರ್ಷಕವಾಗಿ ನರ್ತಿಸಿದರು. ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ನೃತ್ಯಕಲಾವಿದೆ ಮಿಲನಾ ಭರತ್, ಅಕ್ಷಿತಾ ಮತ್ತು ಛಾಯಾ ಅವರುಗಳು ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಮಧ್ಯಾಹ್ನ 10 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಸಂಜೆ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಬಜೆಗುಂಡಿಯ ಕೆ.ವಿ. ಪ್ರಭಾಕರ್, ಮಾಜೀ ಸೈನಿಕ ಎಂ.ಪಿ. ಪೂವಯ್ಯ, ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಸೆಸ್ಕ್ ಇಲಾಖೆಯ ಸದಾಶಿವ ಜಾದವ್, ಕ್ರೀಡಾಕ್ಷೇತ್ರದ ಸಾಧನೆಗಾಗಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಸಚಿನ್ ಪೂವಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ನಂತರ ಉದಯ ಟಿ.ವಿ. ರೂಪೇಶ್ ಅವರ ಜಾಲಿಬಾಯ್ಸ್ ತಂಡದಿಂದ ಸಂಗೀತ ರಸಮಂಜರಿ, ಕಲರ್ಸ್ ಸೂಪರ್‍ನ ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸಿಂ, ನೀತು ಸುಬ್ರಮಣ್ಯ, ಜೂನಿಯರ್ ಶಂಕರ್‍ನಾಗ್, ಜೂ. ರವಿಚಂದ್ರನ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‍ನ ನೃತ್ಯಪಟುಗಳಿಂದ ಮೂಡಿಬಂದ ಆಕರ್ಷಕ ನೃತ್ಯ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿತು.

ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್, ಉಪಾಧ್ಯಕ್ಷ ಫಾರೂಕ್, ಖಜಾಂಚಿ ಮಹಮ್ಮದ್ ಶಫಿ, ಉಪ ಕಾರ್ಯದರ್ಶಿ ಜನಾರ್ಧನ್ ಸಹ ಕಾರ್ಯದರ್ಶಿ ಕೆ.ಪಿ. ಸುರೇಶ್, ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಪಾಣತ್ತಲೆ ಶಶಿಧರ್, ಸಂಘದ ಗೌರವಾಧ್ಯಕ್ಷ ಬಿ.ಪಿ. ಗಣೇಶ್, ಸಲಹೆಗಾರ ರಾಮು, ಕೆ.ಪಿ. ರವೀಶ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವದ ಯಶಸ್ಸಿಗೆ ಶ್ರಮಿಸಿದರು.