ಮಡಿಕೇರಿ, ಅ. 31: ಸುಂಟಿಕೊಪ್ಪದ ವಿಕಾಸ ಜನಸೇವಾ ಟ್ರಸ್ಟ್ನ ಹಿರಿಯ ನಾಗರಿಕರಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಪ್ರಥಮ ಚಿಕಿತ್ಸೆಯ ಕಿಟ್ ನೀಡಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಜೊಸೇಫ್ ಮ್ಯಾಥ್ಯು ಸುಂಟಿಕೊಪ್ಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಕಾಸ ಜನಸೇವಾ ಟ್ರಸ್ಟ್ ನಿರ್ವಹಣೆಯ ಹಿರಿಯ ನಾಗರಿಕರ ಆಶ್ರಯ ತಾಣಕ್ಕೆ ಭೇಟಿ ನೀಡಿ ಅಲ್ಲಿನ 20 ಹಿರಿಯ ನಾಗರಿಕರಿಗೆ ಅಗತ್ಯವಾಗಿದ್ದ ಪ್ರಥಮ ಚಿಕಿತ್ಸಾ ಕಿಟ್, ಔಷಧಿ ವಿತರಿಸಿದರು.
ರೋಟರಿ ವತಿಯಿಂದ ಹಿರಿಯ ನಾಗರಿಕರ ಅಭ್ಯುದಯಕ್ಕಾಗಿಯೇ ಜೀವನ್ ಸಂಧ್ಯಾ ಎಂಬ ವಿಶೇಷ ಯೋಜನೆ ಜಾರಿಗೊಳಿಸಲಾಗಿದ್ದು, ಬದುಕಿನ ಸಂಧ್ಯಾ ಕಾಲದಲ್ಲಿ ಯಾವದೇ ರೀತಿಯ ಸಮಸ್ಯೆ, ಸಂಕಷ್ಟಗಳಿಗೆ ಹಿರಿಯರು ಸಿಲುಕಬಾರದು ಎಂಬ ದೃಷ್ಟಿಯಿಂದ ರೋಟರಿ ಸದಸ್ಯರು ಯೋಜನೆ ಯಶಸ್ವಿಗೆ ಮುಂದಾಗಿದ್ದಾರೆ ಎಂದು ಜೊಸೇಫ್ ಮ್ಯಾಥ್ಯು ಹೇಳಿದರು.
ಆಶ್ರಯ ತಾಣದಲ್ಲಿನ ಕೆಲವು ಹಿರಿಯರು ಮಕ್ಕಳಿಂದ ತಾವು ನೋವುಂಡದ್ದಾಗಿ ಭಾವುಕರಾಗಿ ಹೇಳಿಕೊಂಡರು. ಪ್ರಥಮ ಚಿಕಿತ್ಸಾ ಕಿಟ್ ವಿತರಣಾ ಸಂದರ್ಭ ರೋಟರಿ ಸಹಾಯಕ ಗವರ್ನರ್ ಪಿ. ನಾಗೇಶ್, ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಜೋನಲ್ ಲೆಫ್ಟಿನೆಂಟ್ ಕೇಶವ ಪ್ರಸಾದ್ ಮುಳಿಯ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಗದೀಶ್ ಪ್ರಶಾಂತ್, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಯೂತ್ ಸರ್ವೀಸ್ ಜಿಲ್ಲಾ ಅಧ್ಯಕ್ಷ ದೇವಣೀರ ತಿಲಕ್, ಮಿಸ್ಟಿ ಹಿಲ್ಸ್ ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕ ರತ್ನಾಕರ್ ರೈ, ಕಾರ್ಯಪ್ಪ, ನಾಗರಾಜ್, ಸಂದೀಪ್, ಶ್ರೀಹರಿರಾವ್, ಲಿಂಗರಾಜು, ಮಿಸ್ಟಿ ಹಿಲ್ಸ್ ಸದಸ್ಯರು ಪಾಲ್ಗೊಂಡಿದ್ದರು.
ಅಂತೆಯೇ, ಗರಗಂದೂರಿನ ಶ್ರೀಮತಿ ಡಿ. ಚೆನ್ನಮ್ಮ ಶಾಲೆಗೆ ತೆರಳಿದ ರೋಟರಿ ಪ್ರಮುಖರು ಆ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್.ಡಿ. ಕೋಟೆಯ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದ ವಿಜ್ಞಾನ ವಾಹಿನಿ ಸಂಚಾರಿ ಪ್ರಯೋಗಾಲ ಯದ ಕಾರ್ಯವಿಧಾನ ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ರೀತಿಯಲ್ಲಿ ವಿಜ್ಞಾನ ಮಾದರಿಯ ಪರಿಚಯ ಮಾಡಿಕೊಡುತ್ತಿರುವ ವ್ಯವಸ್ಥೆಯ ಬಗ್ಗೆ ಜೊಸೇಫ್ ಮ್ಯಾಥ್ಯು ಪ್ರಶಂಸೆ ವ್ಯಕ್ತಪಡಿಸಿದರು.