ಗೋಣಿಕೊಪ್ಪ ವರದಿ, ಅ. 31: ವಿದ್ಯುತ್ ಬಿಲ್ ಪಾವತಿಸಲು ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಬಿಲ್‍ನ್ನು ಪಾವತಿಗೆ ಬಡ್ಡಿ ರಹಿತ ಪಾವತಿಗೆ ಸಮಯವಕಾಶ ನೀಡಬೇಕು ಎಂದು ಒತ್ತಾಯಿಸಿ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ವತಿಯಿಂದ ಗೋಣಿಕೊಪ್ಪ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.

10 ಹೆಚ್.ಪಿ. ನೀರೆತ್ತುವ ಯಂತ್ರಕ್ಕೆ ಉಚಿತ ವಿದ್ಯುತ್ ನೀಡಲು ಸರ್ಕಾರದ ಆದೇಶವಿದ್ದರೂ ಕೂಡ ಇಲಾಖೆ ನಿಯಮ ಪಾಲಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಸಮರ್ಪಕವಾಗಿ ವಿದ್ಯುತ್ ಸೇವೆ ನೀಡದ ಸೆಸ್ಕ್ ಬಿಲ್ ವಸೂಲಾತಿಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲದೆ ಕತ್ತಲ ಬದುಕು ಇದೆ. ಈ ಬಗ್ಗೆ ಕಾಳಜಿ ವಹಿಸಿ ರೈತರಿಗೆ ದಿನಪೂರ್ತಿ ವಿದ್ಯುತ್ ಕಲ್ಪಿಸಲು ಯೋಜನೆ ರೂಪಿಸಬೇಕು. ಬಿಲ್ ವಸೂಲಿ ನೆಪದಲ್ಲಿ ವಿದ್ಯುತ್ ಕಡಿತ, ಬಡ್ಡಿ ವಸೂಲಿ ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಮಾತನಾಡಿ, ರೈತರ ಮನೆಗಳ ವಿದ್ಯುತ್ ಬಿಲ್ ಪಾವತಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಪ್ರಾಕೃತಿಕ ವಿಕೋಪದಿಂದ ಬೆಳೆ ಕಳೆದುಕೊಂಡು ರೈತರು ತೊಂದರೆಯಲ್ಲಿ ಸಿಲುಕಿದ್ದಾರೆ. ಸೆಸ್ಕ್ ರೈತರಿಗೆ ಮಾಹಿತಿ ನೀಡದೆ, ಬಿಲ್ ಪಾವತಿಸದ ಗ್ರಾಹಕರ ಮನೆಗಳ ವಿದ್ಯುತ್ ಕಡಿತಗೊಳಿಸುತ್ತಿರುವದರಿಂದ ತೊಂದರೆಯಾಗಿದೆ. ಬೆಳೆಗಾರರಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿ ರುವದನ್ನು ಅರ್ಥ ಮಾಡಿಕೊಂಡು ಇಲಾಖೆ ಇಲ್ಲಿವರೆಗಿನ ವಿದ್ಯುತ್ ಬಿಲ್ ಮನ್ನಾ ಮಾಡಬೇಕಿದೆ. ಮುಂದಿನ ಮಾರ್ಚ್ ತಿಂಗಳವರೆಗೆ ಬಡ್ಡಿ ರಹಿತ ವಿದ್ಯುತ್ ಬಿಲ್ ಪಾವತಿಗೆ ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸೆಸ್ಕ್ ಇಇ ಅಂಕಯ್ಯ ಪ್ರತಿಭಟನಾ ನಿರತ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿ, ಮಾತನಾಡಿ, ತೀರಾ ಕಷ್ಟದಲ್ಲಿರುವ ಗ್ರಾಹಕರ ಬಿಲ್ ಪಾವತಿಗೆ ಒತ್ತಡ ಹೇರುವದಿಲ್ಲ.

ಮುಂದಿನ ಮಾರ್ಚ್ ತಿಂಗಳವರೆಗೆ ಪಾವತಿಗೆ ಸಮಯಾವಕಾಶ ನೀಡಬೇಕು ಎನ್ನುವ ರೈತರ ಹೋರಾಟಕ್ಕೆ ಪೂರಕವಾಗಿ ನಿರ್ಧರಿಸಲು ಸೆಸ್ಕ್ ಹಿರಿಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಚರ್ಚೆ ನಡೆಸಲಾಗುವದು ಎಂದು ಭರವಸೆ ನೀಡಿದರು.

15 ದಿನಗಳಲ್ಲಿ ಸಭೆ ನಡೆಸುವದಾಗಿ ಅವರು ತಿಳಿಸಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ಪರ ಕಾರ್ಯದರ್ಶಿ ಕಳ್ಳಿಚಂಡ ಧನು, ಸಂಚಾಲಕ ಬಾದುಮಂಡ ಎಸ್. ಮಹೇಶ್, ಖಜಾಂಚಿ ಚಂಗುಲಂಡ ರಾಜಪ್ಪ, ಆದೇಂಗಡ ಅಶೋಕ್, ಚೆಪ್ಪುಡೀರ ಮಹೇಶ್, ಚಿಮ್ಮಣಮಾಡ ರಾಜಾ, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕರಿನೆರವಂಡ ದೀಪಾ ಮುತ್ತಮ್ಮ, ಕರಿನೆರವಂಡ ರಮ್ಯ ಸೇರಿದಂತೆ ಗೋಣಿಕೊಪ್ಪ, ಬಾಳೆಲೆ, ಕಾನೂರು, ಕಿರುಗೂರು, ನಲ್ಲೂರು, ಶ್ರೀಮಂಗಲ, ಬಿರುನಾಣಿ, ಕುಟ್ಟ, ನಾಲ್ಕೇರಿ, ಹುದಿಕೇರಿ ಭಾಗದ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.