ಮಡಿಕೇರಿ, ಅ. 31: ಮಡಿಕೇರಿಯ ಕೆ. ಬಾಡಗದಲ್ಲಿ ನಿರ್ಮಾಣಗೊಂಡಿರುವ ನೂತನ ಜಿ.ಪಂ. ಆಡಳಿತ ಭವನದಲ್ಲಿ ಒದಗಿಸಿರುವ ಶಾಸಕರ ಕಚೇರಿಯು; ಸಾರ್ವಜನಿಕರಿಗೆ ದೂರವಿರುವ ಕಾರಣ ತಮಗೆ ಬೇಡವೆಂದು; ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಈಗಾಗಲೇ ನಿರಾಕರಿಸಿದ್ದಾರೆ. ಬದಲಾಗಿ ಮಡಿಕೇರಿ ನಗರದೊಳಗೆ ಸದ್ಯದಲ್ಲೇ ಕಚೇರಿ ಹುಡುಕಿಕೊಳ್ಳಲು ಪ್ರಯತ್ನಿಸುವದಾಗಿ ಅವರು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ್ದಾರೆ. ಇತ್ತ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಕೂಡ; ಗ್ರಾಮೀಣ ಭಾಗದ ಜನರಿಗೆ ಬಂದು ಹೋಗಲು ತೊಂದರೆಯ ಕಾರಣ; ನೂತನ ಜಿ.ಪಂ. ಭವನದಲ್ಲಿ ತಮಗೆ ಒದಗಿಸಿರುವ ಮೇಲ್ಮನೆ ಸದಸ್ಯರ ಕಚೇರಿಗೆ ತೆರಳುವದಿಲ್ಲವೆಂದು ‘ಶಕ್ತಿ’ಯೊಂದಿಗೆ ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಮೇಲ್ಮನೆಯ ಇನ್ನೋರ್ವ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಜಿ.ಪಂ. ಭವನದ ನೂತನ ಕಚೇರಿಗೆ ತೆರಳಲು ಹರ್ಷ ವ್ಯಕ್ತಪಡಿಸಿದ್ದು; ಸ್ವಲ್ಪ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.