ಮಡಿಕೇರಿ, ಅ. 31: ಕೊಡಗು ಜಿಲ್ಲೆಯ 2 ತಾಲೂಕುಗಳ 9 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳನ್ನು ಚುನಾವಣೆಗಳ ಮೂಲಕ ತುಂಬಲು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವೇಳಾಪಟ್ಟಿ ನಿಗದಿ ಮಾಡಿದ್ದಾರೆ.

ಮಡಿಕೇರಿ ತಾಲೂಕಿನ ಎಮ್ಮೆಮಾಡು ಕ್ಷೇತ್ರ ಸಂಖ್ಯೆ 1 ಮತ್ತು 2, ನೆಲಜಿ ಕ್ಷೇತ್ರ 1, ವೀರಾಜಪೇಟೆಯ ಕಣ್ಣಂಗಾಲ ಕ್ಷೇತ್ರ 2, ಕುಟ್ಟ ಕ್ಷೇತ್ರ 3, ಕುಟ್ಟಂದಿ (ಕೊಂಗಣ), ಕಾರ್ಮಾಡು ಕ್ಷೇತ್ರ 1, ಕೊಳತ್ತೋಡು ಬೈಗೋಡು, ಗೋಣಿಕೊಪ್ಪಲು ಕ್ಷೇತ್ರ ಸಂಖ್ಯೆ 5ಕ್ಕೆ ಚುನಾವಣೆ ನಡೆಯಲಿದೆ.

1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿ ನಿಯಮದ ಉಪಬಂಧಗಳ ಅಡಿಯಲ್ಲಿ ತೆರವಾಗಿರುವ 9 ಗ್ರಾಮ ಪಂಚಾಯಿತಿಯ ತಲಾ 1 ಕ್ಷೇತ್ರಕ್ಕೆ ಈ ಚುನಾವಣೆ ನಡೆಯಲಿದೆ. ತಾ. 31 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ನ. 2 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ. 4 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಅಗತ್ಯವಿದ್ದರೆ ನ. 12 ರಂದು ಮತದಾನ ನಡೆಯಲಿದೆ. ನ. 14 ರ ಮುನ್ನ ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯ ಮಾಡಬೇಕಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.