ಮಡಿಕೇರಿ, ಅ.31: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಚಿತ್ರ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಮತ್ತು ಅಗತ್ಯ ತರಬೇತಿಯ ಕೊರತೆ ಇದ್ದು, ಇದನ್ನು ನೀಗಿಸುವ ನಿಟ್ಟಿನಲ್ಲಿ ಕಲಾ ಶಾಲೆ ಅಥವಾ ಕಲಾ ಗ್ಯಾಲರಿಯ ನಿರ್ಮಾಣದ ಅಗತ್ಯವಿದೆ ಎಂದು ಮಡಿಕೇರಿ ಚಿತ್ರ ಕಲಾವಿದ ಆರ್. ಸಂದೀಪ್‍ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸುವದರ ಜೊತೆಗೆ, ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ ಮತ್ತು ಚಿತ್ರ ಕಲಾವಿದರನ್ನು ಒಗ್ಗೂಡಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಕಲಾ ಶಾಲೆ ಮತ್ತು ಇದಕ್ಕೆ ಪೂರಕವಾದ ವ್ಯವಸ್ಥೆಗಳು ಬೇಕು ಎನ್ನುವದು ನನ್ನ ಅಭಿಲಾಷೆಯಾಗಿದೆ. ನಾನು ರಚಿಸಿರುವ ಕಲಾಕೃತಿಗಳನ್ನು ಮಾರಾಟ ಮಾಡಿ ಬರುವ ಹಣವನ್ನು ಕಲಾ ಶಾಲೆಯ ನಿರ್ಮಾಣಕ್ಕೆ ಬಳಸಲು ಉದ್ದೇಶಿಸಿದ್ದೇನೆ. ಈ ಪ್ರಯತ್ನಕ್ಕೆ ನಾಡಿನ ಜನತೆ ಕೈಜೋಡಿಸಬೇಕು ಎಂದು ಸಂದೀಪ್ ಕುಮಾರ್ ಮನವಿ ಮಾಡಿದರು.
ಜಿಲ್ಲೆಯ ಯುವ ಕಲಾವಿದರನ್ನು ದೃಷ್ಟಿಯಲ್ಲಿರಿಸಿಕೊಂಡು ನಗರದ ಜಿಎಂಪಿ ಶಾಲೆಯಲ್ಲಿ ಏಕ ವ್ಯಕ್ತಿ ಕಲಾ ಪ್ರದರ್ಶನವನ್ನು ಆಯೋಜಿಸಿದ್ದು,್ಲ 17 ಕಲಾಕೃತಿಗಳನ್ನು ಪ್ರದರ್ಶಿಸಲಾಗುವದು ಎಂದರು.