*ಗೋಣಿಕೊಪ್ಪಲು, ಅ. 31: ಹಿಂದುಳಿದ ಸಮಾಜದವರ ಶುಭ ಸಮಾರಂಭ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ವೀರಾಜಪೇಟೆ ವ್ಯಾಪ್ತಿಯ ಆರ್ಜಿ ಗ್ರಾಮದಲ್ಲಿ ನಿರ್ಮಿಸಿದ ವಾಲ್ಮೀಕಿ ಭವನ ನಿರುಪಯುಕ್ತವಾಗುತ್ತಿದೆ.
ಕಳೆದ 6 ವರ್ಷಗಳ ಹಿಂದೆ ನಿರ್ಮಾಣವಾದ ವಾಲ್ಮೀಕಿ ಭವನ ಉಪಯೋಗಕ್ಕೆ ಬಾರದ ಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೀತಾರಾಮ್ ಅವರು ತರಾತುರಿಯಲ್ಲಿ ತಾಲೂಕು ವ್ಯಾಪ್ತಿಯ ಕಾಮಗಾರಿಗಳಿಗೆ ಚಾಲನೆ ಮತ್ತು ಕಟ್ಟಡಗಳ ಉದ್ಘಾಟನೆ ನಡೆಸಿದ್ದರು. ಪುರಭವನದಲ್ಲೇ ಎಲ್ಲಾ ಕಾಮಗಾರಿ ಮತ್ತು ಕಟ್ಟಡದ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಿ ವಾಲ್ಮೀಕಿ ಭವನಕ್ಕೂ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದ ಪರಿಣಾಮವೇ ಅಧಿಕಾರಿಗಳಿಗೆ ವಾಲ್ಮೀಕಿ ಭವನ ಕಟ್ಟಡ ನಿರ್ಮಾಣವಾಗಿರುವ ಮಾಹಿತಿ ಇಲ್ಲದಂತಾಗಿದೆ. ಕಟ್ಟಡ ಇರುವ ಸ್ಥಳದಲ್ಲೇ ಉದ್ಘಾಟನಾ ಭಾಗ್ಯ ಕಂಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಸಮುದಾಯದವರ ಅನುಕೂಲಕ್ಕಾಗಿ ಕೋಟಿ ವೆಚ್ಚದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ನಿರುಪಯುಕ್ತವಾಗುತ್ತಿದೆ. ಕಳೆದ ಅಕ್ಟೋಬರ್ 13 ರಂದು ವಾಲ್ಮೀಕಿ ಜಯಂತಿಯನ್ನು ತಾಲೂಕಿನಲ್ಲಿ ಆಚರಿಸಲಾಗಿದೆ. ಆದರೆ ಸುಸಜ್ಜಿತ ಸಮುದಾಯ ಭವನವನ್ನು ಹೊಂದಿದ್ದರೂ ಜಯಂತಿಯನ್ನು ಈ ಕಟ್ಟಡದಲ್ಲಿ ಆಚರಿಸಲು ಮುಂದಾಗಿಲ್ಲ. ಈ ಕಟ್ಟಡ ಇರುವ ಬಗ್ಗೆ ಅಧಿಕಾರಿಗಳು ಮರೆತಿರುವ ಪರಿಣಾಮವೇ ವಾಲ್ಮೀಕಿ ಜಯಂತಿ ತಾಲೂಕು ಪುರಭವನದಲ್ಲಿ ನಡೆಯಲು ಕಾರಣವಾಗಿದೆ.
ನಾಯಕ ಜನಾಂಗದ ವ್ಯವಸ್ಥೆಗಾಗಿ ಸುಂದರ ಪರಿಸರದ ನಡುವೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಸಮುದಾಯ ಭವನದ ಸುತ್ತಲೂ ಕುರುಚಲು ಗಿಡಗಳು ಬೆಳೆದು ನಿಂತಿವೆ. ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳಿಗೆ, ಶುಭ ಸಮಾರಂಭಗಳಿಗೆ ಅನುಕೂಲವಾಗಬೇಕಾದ ಭವನ ಮುಂದೆ ಕಿಡಿಗೇಡಿಗಳ, ಪುಂಡರ ಚಟುವಟಿಕೆಗಳ ತಾಣವಾಗಲಿದೆಯೇ ಎಂಬ ಆತಂಕ ಕಾಡುತ್ತಿದೆ. ಈ ಸ್ಥಿತಿ ಎದುರಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಜನಾಂಗದ ಅನುಕೂಲಕ್ಕೆ ಸಮುದಾಯ ಭವನದ ವ್ಯವಸ್ಥೆ ಕಲ್ಪಿಸುವ ಕ್ರಮಕ್ಕೆ ಮುಂದಾಗಬೇಕಾಗಿದೆ.
ಭವನದ ನಿರ್ಮಾಣವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ನೀಡಿದ್ದರೆ ಕಟ್ಟಡ ಉಪಯೋಗ ಲಭ್ಯವಾಗುತ್ತಿತ್ತು. ತಾಲೂಕು ದಂಡಾಧಿಕಾರಿಗಳು ಕಟ್ಟಡದ ಕೀಯನ್ನು ಭದ್ರವಾಗಿ ಇಟ್ಟುಕೊಂಡಿದ್ದಾರೆ. ಆದರೆ ಜನಾಂಗದ ಕಾರ್ಯಕ್ರಮಗಳಿಗೆ ಕಟ್ಟಡ ವ್ಯವಸ್ಥೆ ಕಲ್ಪಿಸಲು ಮುಂದಾಗಿಲ್ಲ. ಇನ್ನು ಮುಂದಾದರೂ ವ್ಯವಸ್ಥಿತವಾಗಿ ಕಟ್ಟಡ ಕಾರ್ಯಕ್ರಮಗಳಿಗೆ ಉಪಯೋಗವಾಗಲಿ ಎಂದು ತಾ.ಪಂ. ಸದಸ್ಯ ಬಿ.ಎಂ. ಗಣೇಶ್ ಅಭಿಪ್ರಾಯಿಸಿದ್ದಾರೆ.
- ಎನ್.ಎನ್. ದಿನೇಶ್