ಮಡಿಕೇರಿ, ಅ. 31: ಬೆಂಗಳೂರಿನ ಕೊಡಗು ಗೌಡ ಸಮಾಜದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ ನ. 3 ರಂದು ಸಂಭ್ರಮದಿಂದ ನಡೆಯಲಿದೆ ಎಂದು ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಆಮೆ ಸಿ. ಸೀತಾರಾಮ್ ಹಾಗೂ ಕಾರ್ಯದರ್ಶಿ ಚೊಕ್ಕಾಡಿ ಅಪ್ಪಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ಕೊಡಗು ಗೌಡ ಸಮಾಜದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಆಮೆ ಸಿ. ಸೀತಾರಾಮ್ ವಹಿಸಿಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್‍ನಾರಾಯಣ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ಕಂದಾಯ ಸಚಿವ ಆರ್. ಅಶೋಕ್, ಕೊಡಗು ಮತ್ತು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕರು ಹಾಗೂ ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಾಜಿ ಶಾಸಕರಾದ ಗೋಪಾಲಯ್ಯ, ಎಸ್.ಟಿ. ಸೋಮಶೇಖರ್, ಮಡಿಕೇರಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಬೃ.ಬೆಂ.ಮ.ನ.ಪಾ. ವಾರ್ಡ್ ಸಂಖ್ಯೆ 130ರ ಸದಸ್ಯೆ ಶಾರದ ಮುನಿರಾಜು ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ನೆನಪಿನ ಸಂಚಿಕೆ ಸುವರ್ಣ ಸಮೃದ್ಧಿ ಮತ್ತು ಧ್ವನಿಸುರುಳಿ ಬಿಡುಗಡೆಯಾಗಲಿದೆ. ಸಮಾಜದ ಗಣ್ಯರನ್ನು ಸನ್ಮಾನಿಸಲಾಗುವದು. ವಿವಿಧ ರಂಗದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಮಾಡಲಾಗುವದು ಹಾಗೂ ಪ್ರತಿಭಾ ಪುರಸ್ಕಾರ ವಿತರಣೆಯಾಗಲಿದೆ. ಕೊಡಗು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಸಮಾಜದ ಸದಸ್ಯರುಗಳು ಇದ್ದು, ಈ ಸಮಾರಂಭಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಗೌಡಸಮಾಜದ ಬಂಧುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
1967ರಲ್ಲಿ ಹತ್ತು ಕುಟುಂಬದ ಹದಿನೆಂಟು ಗೋತ್ರದ ಗೌಡ ಜನಾಂಗದ ಹಿರಿಯರಿಂದ ಸ್ಥಾಪಿಸಲ್ಪಟ್ಟ ಬೆಂಗಳೂರಿನ ವಿಶ್ವೇಶ್ವರ ಲೇಜೌಟ್‍ನಲ್ಲಿರುವ ಕೊಡಗು ಗೌಡ ಸಮಾಜ ತನ್ನ ಯಶಸ್ವಿ ಐವತ್ತು ವರ್ಷಗನ್ನು ಪೂರೈಸಿ ಸುವರ್ಣ ಸಂಭ್ರಮದ ಕ್ಷಣಗಳನ್ನು ಎದುರು ನೋಡುತ್ತಿದೆ. ದಿ. ಕೆದಂಬಾಡಿ ಮುದ್ದಪ್ಪ ಅವರು ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದು, ತದನಂತರ 10 ಅಧ್ಯಕ್ಷರು ಗೌಡ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಮೂವತ್ತೈದು ಸಾವಿರ ಚದರ ಅಡಿ ವಿಸ್ತಿರ್ಣದ ಜಾಗದಲ್ಲಿ ಇಂದು ತಲೆ ಎತ್ತಿನಿಂತಿರುವ ಐದಂಸ್ತಿನ ಭವ್ಯ ಕಟ್ಟಡದ ಸಮುದಾಯ ಭವನದ ಕಾಮಗಾರಿ ಕಾರ್ಯ ರೂ. 6-7 ಕೋಟಿ ವೆಚ್ಚದಲ್ಲಿ ಬಹುತೇಕ ಪೂರ್ಣ ಗೊಂಡಿದೆ. ಇನ್ನುಳಿದ ಕಟ್ಟಡದ ಒಳಾಂಗಣ ಕಾಮಗಾರಿ ಪ್ರಗತಿಯಲ್ಲಿದೆ.
ಗೌಡ ಜನಾಂಗದ ಮತ್ತು ಸಾರ್ವಜನಿಕ ಸೇವೆಗಳಲ್ಲಿ ತೊಡಗಿಕೊಂಡಿರುವ ಈ ಸಂಸ್ಥೆ ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಜಲಪ್ರಳಯದ ಸಂತ್ರಸ್ತರಿಗಾಗಿ ಸಾರ್ವಜನಿಕರ ನೆರವಿನಿಂದ ಕೊಡಗಿಗೆ ಖುದ್ದಾಗಿ ಬಂದು ಹತ್ತೊಂಬತ್ತು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಹಂಚಿದೆ. ಅಲ್ಲದೇ ಸುಮಾರು 9 ಲೋಡ್ ಅತ್ಯಗತ್ಯ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.