ಕುಶಾಲನಗರ, ಅ. 31: ಕುಶಾಲನಗರದಲ್ಲಿ ನೆರೆ ಸಂತ್ರಸ್ತರಿಗೆ ನೀಡಬೇಕಾದ ಹಣ ಬೇರೆಯವರ ಖಾತೆಗೆ ಜಮಾ ಆಗಿ ನೈಜ ಸಂತ್ರಸ್ತರು ಬವಣೆ ಪಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಕುಶಾಲನಗರ ಕಾವೇರಿ ನದಿ ತಟದ ಬಹುತೇಕ ಬಡಾವಣೆಗಳು ಮುಳುಗಿದ್ದು ಈ ಸಂದರ್ಭ ಕುಶಾಲನಗರ ಬಿಎಸ್ಎನ್ಎಲ್ ನೌಕರ ಎ. ರಾಯಪ್ಪ ಅವರ ಮನೆಯೂ ಜಲಾವೃತಗೊಂಡಿತ್ತು. ಕುಶಾಲನಗರ ಪ.ಪಂ. ಮೂಲಕ ಸಂತ್ರಸ್ತರಿಗೆ 10 ಸಾವಿರ ಮೊತ್ತವನ್ನು ಬ್ಯಾಂಕ್ ಮೂಲಕ ಪಾವತಿಸುವ ಸಂದರ್ಭ ಹಣ ಸಮೀಪದ ಕೊಪ್ಪ ಗ್ರಾಮದಲ್ಲಿರುವ ವ್ಯಕ್ತಿಯೊಬ್ಬನ ಖಾತೆಗೆ ವರ್ಗಾವಣೆಗೊಂಡಿದ್ದು ಸಂತ್ರಸ್ತರು ಹಣ ದೊರೆಯದೆ ಪಂಚಾಯ್ತಿಗೆ ಅಲೆದಾಡುವ ಪರಿಸ್ಥಿತಿ ಸೃಷ್ಠಿಯಾಗಿದೆ.
ಬದಲೀ ಖಾತೆಯಲ್ಲಿ ಹಣ ದೊರೆತ ವ್ಯಕ್ತಿ ಹಣವನ್ನು ಬ್ಯಾಂಕಿನಿಂದ ಪಡೆದಿರುವ ಬಗ್ಗೆ ದಾಖಲೆಗಳು ಕಂಡುಬಂದಿವೆ. ಈ ಬಗ್ಗೆ ಪಪಂ ಅಧಿಕಾರಿಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು ಇನ್ನೂ ತನಗೆ ಪರಿಹಾರ ಧನ ದೊರೆತಿಲ್ಲ ಎಂದು ರಾಯಪ್ಪ ತಿಳಿಸಿದ್ದಾರೆ.