ಮಡಿಕೇರಿ, ಅ. 31: ಮಾನವೀಯ ಸಂದೇಶಗಳನ್ನು ಜಗಕ್ಕೆ ಸಾರಿದ ವಿಶ್ವ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ 1494ನೇ ಜನ್ಮ ದಿನದ ಕುರಿತು ಪ್ರಚಾರ ಪಡಿಸುವ ಸಲುವಾಗಿ ನ.3 ರಂದು ನಾಪೋಕ್ಲು ವಿನಲ್ಲಿ ಈದ್ ಮಿಲಾದ್ ಸಂದೇಶ ಜಾಥಾ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಾಪೋಕ್ಲುವಿನ ರೇಂಜ್ ಸುನ್ನಿ ಜಂಇಯ್ಯತುಲ್ ಉಲಾಮದ ಅಧ್ಯಕ್ಷರಾದ ಪಿ.ಎ. ಅಬೂಬಕ್ಕರ್, ನಾಪೋಕ್ಲು ಮತ್ತು ಎಮ್ಮೆಮಾಡು ರೇಂಜ್ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಜಂಟಿ ಆಶ್ರಯದಲ್ಲಿ ನ.3 ರಂದು ಮಧ್ಯಾಹ್ನ 2 ಗಂಟೆಗೆ ನಾಪೋಕ್ಲುವಿನ ಹಳೇ ತಾಲೂಕಿನಿಂದ ಮಾರುಕಟ್ಟೆ ವರೆಗೆ ಜಾಥಾ ನಡೆಯಲಿದೆ ಎಂದರು. ರೇಂಜಿಗೊಳಪಟ್ಟ ಮದ್ರಸ ವಿದ್ಯಾರ್ಥಿಗಳ ದಫ್ ಮತ್ತು ಸ್ಕೌಟ್ಸ್ ಪ್ರದರ್ಶನದೊಂದಿಗೆ ಜಾಥಾ ಸಾಗಲಿದೆ. ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾದ ಅಧ್ಯಕ್ಷರು ಹಾಗೂ ಜಿಲ್ಲಾ ನಾಯಿಬ್ ಖಾಝಿಗಳಾದ ಕೆ.ಎ. ಮಹಮೂದ್ ಮುಸ್ಲಿಯಾರ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಸೋಮವಾರ ಪೇಟೆಯ ಶಾಫಿ ಸಅದಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.
ಸಾದಾತುಗಳು, ಆಲಿಂಗಳು, ಮುತಅಲ್ಲಿಂಗಳು, ಮೊಹಲ್ಲಾಗಳ ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಲಾಮದ ಕಾರ್ಯಕಾರಿ ಸಮಿತಿಯ ಚೆರ್ಮಾನ್ ಸಯ್ಯಿದ್ ಮುಹಮ್ಮದ್ ಖಾತಿಂ ಸಖಾಫಿ, ಕನ್ವೀನರ್ ಕಾನಂಗಾಡ್ ಮುಹಮ್ಮದ್ ಮುಸ್ಲಿಯಾರ್, ಎಮ್ಮೆಮಾಡು ರೇಂಜ್ ಸುನ್ನಿ ಜಮಾಯತ್ ಉಲಾಮದ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಉಪಸ್ಥಿತರಿದ್ದರು.