ಬೆಂಗಳೂರು, ಅ. 31: ಟಿಪ್ಪು ಸುಲ್ತಾನ್ ಪಠ್ಯವನ್ನು ಶಾಲಾ ಪಠ್ಯ ಕ್ರಮದಿಂದ ತೆಗೆಯುವ ರಾಜ್ಯಸರ್ಕಾರದ ನಿರ್ಧಾರ ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ಧವಾದ ಅಭಿಪ್ರಾಯ ಗಳು ಕೇಳಿಬರುತ್ತಿವೆ. ಈ ಮಧ್ಯೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್, ಟಿಪ್ಪು ಸುಲ್ತಾನ್ ಪಠ್ಯವನ್ನು ಶಾಲಾ ಪಠ್ಯ ಕ್ರಮದಿಂದ ತೆಗೆಯುವಂತೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ದೂರು ನೀಡಿದ್ದು, ಅದನ್ನು ಪರಿಶೀಲಿಸುವಂತೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ಸೂಚಿಸಿರುವದಾಗಿ ತಿಳಿಸಿದರು. ಈ ಸಂಬಂಧ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಸಭೆ ನಡೆಸಲುತಿಳಿಸಿದ್ದೇನೆ. ತಾ. 7 ರಂದು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಸಭೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಸಮಿತಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಸಮಿತಿ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಆ ನಂತರ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.