ಮಡಿಕೇರಿ, ಅ.31: ಜಿಲ್ಲೆಯ ಕಂದಾಯ ಇಲಾಖೆ ಸಿಬ್ಬಂದಿಗಳು ಕರ್ತವ್ಯದ ವೇಳೆಯಲ್ಲಿ ಕಚೇರಿಯಲ್ಲಿ ಹಾಜರಿರದೆ ಇರುವದರಿಂದ ಸಾರ್ವಜನಿಕರ ಅರ್ಜಿಗಳು ಸಕಾಲದಲ್ಲಿ ವಿಲೇವಾರಿವಾಗುತ್ತಿಲ್ಲವೆಂದು ಆರೋಪಿಸಿರುವ ವೀರನಾಡು ರಕ್ಷಣಾ ವೇದಿಕೆ, ಎಲ್ಲಾ ಸರಕಾರಿ ಕಚೇರಿಗಳ ಪಂಚಿಂಗ್ ಯಂತ್ರವನ್ನು ದುರಸ್ತಿ ಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ, ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಆರ್ಐ ಹಾಗೂ ಬಹುತೇಕ ಸಿಬ್ಬಂದಿಗಳು ಕರ್ತವ್ಯದ ವೇಳೆಯಲ್ಲಿ ಕಚೇರಿಯಲ್ಲಿ ಹಾಜರಿರುವದಿಲ್ಲ. ಅರ್ಜಿದಾರರು ಯಾವಾಗ ಕಚೇರಿಗೆ ಹೋದರು ಸಿಬ್ಬಂದಿಗಳು ಸಭೆಗಳಿಗೆ ಹೋಗಿದ್ದಾರೆ ಎನ್ನುವ ಉತ್ತರ ಕೇಳಿ ಬರುತ್ತಿದೆ ಎಂದು ಆರೋಪಿಸಿದರು.
ಕೊಡಗಿನ ಕಂದಾಯ ಇಲಾಖೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು ತಪ್ಪಿದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಂದಾಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುವದಾಗಿ ಹೇಳಿದರು.
ಸಂತ್ರಸ್ತರಿಗೆ ಬಾಡಿಗೆ ನೀಡಿ
ಕೊಡಗಿನ ಮಳೆಹಾನಿ ಸಂತ್ರಸ್ತರಿಗೆ ತಕ್ಷಣಕ್ಕೆ ನೂತನ ಮನೆ ಹಸ್ತಾಂತರಿಸಲು ಸಾಧ್ಯವಾಗದಿದ್ದಲ್ಲಿ ಮನೆ ಬಾಡಿಗೆ ನೀಡಿ ಸಹಕರಿಸಿ ಎಂದು ಒತ್ತಾಯಿಸಿದರು.
ಬಾಡಿಗೆ ಮನೆಗಳಲ್ಲಿ ವಾಸವಿರುವ ಸಂತ್ರಸ್ತರಿಗೆ ಇತ್ತೀಚೆಗೆ ಬಾಡಿಗೆ ಹಣ ನೀಡುವದನ್ನೇ ಸರಕಾರ ನಿಲ್ಲಿಸಿದೆ ಎಂದು ಆರೋಪಿಸಿದರು.
ಕಳೆದ ಒಂದು ವರ್ಷಗಳಲ್ಲಿ ಸುಮಾರು 800 ಮನೆಗಳಲ್ಲಿ ಕೇವಲ 35 ಮನೆಗಳನ್ನಷ್ಟೇ ಸಂತ್ರಸ್ತರಿಗೆ ನೀಡಲು ಸರಕಾರಕ್ಕೆ ಸಾಧ್ಯವಾಗಿದೆ ಎಂದು ಟೀಕಿಸಿದರು. ತಕ್ಷಣ ನೂತನ ಮನೆಗಳ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖ ಪಳಂಗಂಡ ಈಶ್ವರ್, ಪೊರ್ಕೆರ ಉತ್ತಪ್ಪ, ಮೂಡ್ಲಿಗೆ ಮನೆ ಗಣೇಶ್, ಕೋಳಿಬೈಲು ಜಯರಾಂ ಹಾಗೂ ಇ.ಎಲ್.ಸುರೇಶ್ ಉಪಸ್ಥಿತರಿದ್ದರು.