ಮಡಿಕೇರಿ, ಅ. 31: ಭಾಗಮಂಡಲ ಪಂಚಾಯಿತಿಯಿಂದ ಬೇರ್ಪಟ್ಟು ಕಳೆದ ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಅಯ್ಯಂಗೇರಿ ಗ್ರಾ.ಪಂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದೆ ನಿದ್ರಾವಸ್ಥೆಯಲ್ಲಿದೆ ಎಂದು ಅಲ್ಲಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಯ್ಯಂಗೇರಿ ಯುವ ಕಾಂಗ್ರೆಸ್ ಪ್ರಮುಖ ಅಬ್ದುಲ್ ರಾಶಿದ್ ಅವರು, ಮುಂದಿನ 10 ದಿನಗಳ ಒಳಗಾಗಿ ಪಂಚಾಯಿತಿಯ ಆಡಳಿತ ಮಂಡಳಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡದಿದ್ದಲ್ಲಿ ಪಕ್ಷಾತೀತವಾಗಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದರು.
ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ಆದರೆ ಅಲ್ಲಿನ ಆಡಳಿತ ಮಂಡಳಿಯ ಸದಸ್ಯರು ಯಾವದೇ ಅಭಿವೃದ್ಧಿ ಕಾರ್ಯಗಳನ್ನು ಇದುವರೆಗೂ ಕೈಗೊಂಡಿಲ್ಲ.
ಕನಿಷ್ಟ ಗ್ರಾಮದ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆಗಳೆಲ್ಲ ಗುಂಡಿಬಿದ್ದು ಹಾಳಾಗಿವೆ ಎಂದು ದೂರಿದರು.
ಪಂಚಾಯಿತಿಗೆ ಅಗತ್ಯವಾಗಿ ಬೇಕಾದ ಅಭಿವೃದ್ಧಿ ಅಧಿಕಾರಿಯನ್ನೇ ಜಿಲ್ಲಾಡಳಿತ ನೇಮಕ ಮಾಡಿಲ್ಲ. ಇದರಿಂದಾಗಿ ಯಾವದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ರಾಮ ಸಭೆಗಳಿಗೆ ಯಾವದೇ ಅಧಿಕಾರಿಗಳು ಹಾಜರಾಗುತ್ತಿಲ್ಲ.
ಅದರಲ್ಲೂ ಆಹಾರ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪಡಿತರ ಚೀಟಿದಾರರು ತಮ್ಮ ಬೆರಳಚ್ಚು ನೀಡಲು ಭಾಗಮಂಡಲಕ್ಕೆ ವಾರಗಟ್ಟಲೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಮುಂದಿನ 10 ದಿನಗಳ ಒಳಗಾಗಿ ಗ್ರಾಮ ಪಂಚಾಯಿತಿಯಲ್ಲೇ ಬೆರಳಚ್ಚು ಪಡೆಯಲು ವ್ಯವಸ್ಥೆ ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಅಬ್ದುಲ್ ರಾಶಿದ್ ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಬೀದಿ ದೀಪ ಅಳವಡಿಸುವದಕ್ಕೂ ಪಂಚಾಯಿತಿಯ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಜನಪತ್ರಿನಿಧಿಗಳು ಯಾವದೇ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ತಕ್ಷಣ ಚಾಲನೆ ನೀಡದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ಅಬ್ದುಲ್ ರಾಶಿದ್ ತಿಳಿಸಿದರು.
ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ರವೂಫ್, ಅಬ್ದುಲ್ ರೆಹಮಾನ್, ಜಲೀಲ್ ಹಾಗೂ ಮನ್ಸೂರ್ ಉಪಸ್ಥಿತರಿದ್ದರು.