ಗೋಣಿಕೊಪ್ಪಲು, ಅ. 30: ವಾಣಿಜ್ಯ ನಗರ ಗೋಣಿಕೊಪ್ಪಲುವಿ ನಲ್ಲಿರುವ ಗ್ರಾಮ ಪಂಚಾಯಿತಿಯಲ್ಲಿ ದಿನನಿತ್ಯ ನಗರದ ಶುಚಿತ್ವ ಕಾರ್ಯ ನಡೆಸುವ ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ದಶಕಗಳಿಂದ ಜೋಪುಡಿಗಳಲ್ಲಿ ವಾಸ ಮಾಡುತ್ತಿರುವ ಇವರ ಬದುಕು ಹಸನಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೆಚ್ಚಿನ ವರಮಾನ ಪಂಚಾಯಿತಿಗೆ ಇದ್ದರೂ ಇವರ ಬದುಕಿಗೆ ಕನಿಷ್ಟ ಕನಿಕರ ತೋರುವಲ್ಲಿ ಪಂಚಾಯ್ತಿ ಅಧ್ಯಕ್ಷರು,ಸದಸ್ಯರು ಸಂಪೂರ್ಣ ವಿಫಲರಾಗಿದ್ದಾರೆ. ಬೆಳ್ಳÀಂಬೆಳಗ್ಗೆ ಎದ್ದು ಊರನ್ನೆಲ್ಲ ಸ್ವಚ್ಚಗೊಳಿಸೋ ಮಂದಿ, ನಗರದ ಕಸ, ಕಡ್ಡಿ, ತ್ಯಾಜ್ಯಗಳನ್ನು ಹೊತ್ತೊಯ್ದು ‘ಕ್ಲೀನ್ ಸಿಟಿ’ ಮಾಡುವ ಅವರ ಬದುಕು ಮಾತ್ರ ಇನ್ನೂ ಹಸನಾಗಿಲ್ಲ. ಅದೇ ಕತ್ತಲ ಬದುಕು, ಗೋಳಿನ ಕಥೆ, ಮುಗಿಯದ ಸಮಸ್ಯೆ ನಡುವೆ ಜೀವನ ಸಾಗಿಸುತ್ತಿದ್ದಾರೆ. ಸೂರ್ಯ ಹುಟ್ಟುವ ಮೊದಲು ದಿನನಿತ್ಯದ ಕೆಲಸಕ್ಕೆ ಹಾಜರಾಗುವ ಪೌರ ಕಾರ್ಮಿಕರು ನಗರದ ಬೀದಿ ಗುಡಿಸಿ ನಗರದ ಅಂದ ಹೆಚ್ಚಿಸುತ್ತಾರೆ. ಮನೆಮನೆಗೆ ತೆರಳಿ ಕಸವನ್ನು ಸಂಗ್ರಹಿಸುತ್ತಾರೆ. ಚರಂಡಿ ಇರಲಿ, ಶೌಚ ಗುಂಡಿ ಇರಲಿ ಶುಚಿ ಗೊಳಿಸುವ ಮೂಲಕ ದುರ್ನಾತವನ್ನು ಇಲ್ಲದಂತೆ ಮಾಡುತ್ತಾರೆ. ಕೆಲಸ ಮುಗಿಸಿ ವಿಶ್ರಾಂತಿ ಪಡೆಯಲು ಇವರು ಮನೆಗೆ ತೆರಳಿದರೆ ಅಲ್ಲಿ ನೆಮ್ಮದಿ ಇಲ್ಲದ ಬದುಕು ಸವೆಸುತ್ತ ಅನೇಕ ವರ್ಷ ಗಳಿಂದ ಇರುವ ಜೋಪಡಿಗಳಲ್ಲೇ ಕಳೆಯುತ್ತಿದ್ದಾರೆ. ಸಮಾಜದ ಸ್ವಚ್ಛತೆ ಕಾಪಾಡಲು ಬಹುಮುಖ್ಯ ಪಾತ್ರ ವಹಿಸಿರುವ ಪೌರ ಕಾರ್ಮಿಕರ ಬದುಕು ಮಾತ್ರ ಮೂರಬಟ್ಟೆ ಯಾಗಿದೆ.(ಮೊದಲ ಪುಟದಿಂದ) ದಿನನಿತ್ಯ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುವ ಕಾರ್ಮಿಕರ ಬದುಕು ಸೂತ್ರವಿಲ್ಲದ ಗಾಳಿಪಟದಂತಾಗಿದೆ.ವಾಣಿಜ್ಯ ನಗರಿ ಗೋಣಿಕೊಪ್ಪಲುವಿನಲ್ಲಿ ದಿನನಿತ್ಯ ರಾಶಿಗಟ್ಟಲೆ ಕಸವನ್ನು ಶುಚಿಗೊಳಿಸುವ ಪೌರಕಾರ್ಮಿಕರ ಬದುಕಿಗೆ ಬೆಲೆ ಇಲ್ಲದಂತಾಗಿದೆ.

ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಮನೆಗಳ ಸುತ್ತ ಮುತ್ತ ಅಶುಚಿತ್ವದಿಂದ ಕೂಡಿದ್ದು.ಅಲ್ಲೇ ಪಕ್ಕದಲ್ಲಿ ಮಾಂಸ, ಮೀನು ಮಾರುಕಟ್ಟೆ ಇರುವದರಿಂದ ಅಲ್ಲಿನ ತ್ಯಾಜ್ಯಗಳಿಂದ ಪೌರಕಾರ್ಮಿಕರ ಮಕ್ಕಳು ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗಿದ್ದಾರೆ.ಆಡುವ ಮಕ್ಕಳು ಕ್ಯಾನ್ಸರ್, ಟಿಬಿ, ಅಸ್ತಮಾ, ಅಲರ್ಜಿಯಂತಹ ಖಾಯಿಲೆಗಳಿಂದ ಬಳಲುತ್ತಿದ್ದಾರೆ.ವರ್ಷದಲ್ಲಿ ಮೂರರಿಂದ ನಾಲ್ವರು ರೋಗ ರುಜಿನಗಳಿಂದಲೇ ಸಾವನ್ನಪ್ಪುತ್ತಿರುವದು ವಿಪರ್ಯಾಸವೇ ಸರಿ.

ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನೂರಾರು ಕುಟಂಬಗಳು ಸಂಕಷ್ಟದಲ್ಲಿ ಸಿಲುಕಿದ್ದ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನೊಂದ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಜನಮಾನಸದಲ್ಲಿ ಉತ್ತಮ ಡಿಸಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು. ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ದ.ಕೊಡಗಿನ ವಿವಿಧ ಭಾಗದಲ್ಲಿ ನೆರೆ ಹಾವಳಿಯಿಂದ ತೊಂದರೆಗೀಡಾದ ಸ್ಥಳಗಳಿಗೆ ಅಧಿಕಾರಿಗಳ ಜೊತೆಗೂಡಿ ಆಗಮಿಸಿದ್ದರು. ಈ ಸಂದರ್ಭ ಗೋಣಿಕೊಪ್ಪ ಪಂಚಾಯಿತಿಯ ಕಸ ವಿಲೇವಾರಿ ಸಮಸ್ಯೆಯ ಗಂಭೀರತೆ ಅರಿತು ಪಂಚಾಯ್ತಿಗೆ ಆಗಮಿಸಿದ್ದರು.

ಕಸ ವಿಲೇವಾರಿಯ ಸಮಸ್ಯೆಗಳನ್ನು ಆಲಿಸಿದ ನಂತರ ಜಿಲ್ಲಾಧಿಕಾರಿಗಳು ಪಂಚಾಯ್ತಿ ಪೌರ ಕಾರ್ಮಿಕರು ವಾಸಿಸುವ ಪ್ರದೇಶಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರ ಸಂಕಷ್ಟಗಳನ್ನು ಆಲಿಸಿದರು. ಸಮೀಪದಲ್ಲಿರುವ ಕೀರೆ ಹೊಳೆಯಿಂದ ನೀರು ತುಂಬಿ ಸಂಕಷ್ಟಕ್ಕೀಡಾಗಿದ್ದ 23 ಪೌರ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಧನ ಹಾಗೂ ಆಹಾರ ಕಿಟ್‍ಗಳನ್ನು ವಿತರಿಸಲು ಸ್ಥಳದಲ್ಲಿಯೇ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗೂ ತಹಶೀಲ್ದಾರ್‍ರವರಿಗೆ,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅಲ್ಲದೆ ಈ ಬಗ್ಗೆ ಪೌರ ಕಾರ್ಮಿಕರ ಕುಟುಂಬಗಳ ಪಟ್ಟಿಯನ್ನು ತಕ್ಷಣವೇ ತನ್ನ ಕಚೇರಿಗೆ ಕಳುಹಿಸಿಕೊಡಲು ಸೂಚನೆ ನೀಡಿದ್ದರು. ಹಾಗೂ ಪೌರ ಕಾರ್ಮಿಕರು ವಾಸಿಸುವ ಮನೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಮನೆ ಇಲ್ಲದವರಿಗೆ ನಿವೇಶನ ನೀಡಲು ಸೂಚನೆ ನೀಡಿ ತೆರಳಿದ್ದರು. ಆದರೆ ತಿಂಗಳು ಕಳೆದರೂ ಕನಿಷ್ಟ ಪರಿಹಾರ ಧನ ವಿತರಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ನೀಡದ ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳು ತೆರಳುತ್ತಿದ್ದಂತೆಯೇ ಇತ್ತ ತಮಗೆ ಈ ವಿಷಯ ಸಂಬಂಧವೇ ಇಲ್ಲ ಎಂಬಂತೆ ಕಾಲ ಕಳೆಯುತ್ತಿದ್ದಾರೆ. ಭರವಸೆ ನೀಡಿ ತೆರಳಿದ ಜಿಲ್ಲಾಧಿಕಾರಿಗಳು ಕೂಡ ನಮಗೆ ಸ್ಪಂದಿಸಿಲ್ಲ ಎಂಬ ನೋವು ಪೌರ ಕಾರ್ಮಿಕರಲ್ಲಿ ಕಾಡುತ್ತಿದೆ.