ಮಡಿಕೇರಿ, ಅ. 30: ಮಂಜಿನನಗರಿ ಮಡಿಕೇರಿಯಲ್ಲಿ ನಗರ ವ್ಯಾಪ್ತಿಯ ಕೊಡವ ಕೇರಿಗಳ ಸಮಾಗಮದೊಂದಿಗೆ ಜರುಗಿದ 6ನೇ ವರ್ಷದ ಅಂತರ ಕೊಡವ ಕೇರಿ ಮೇಳ ಕಾರ್ಯಕ್ರಮ ನಿನ್ನೆ ದಿನವಿಡೀ ಜನಾಕರ್ಷಿಸುವ ಮೂಲಕ ಜರುಗಿತು. ಮುತ್ತಪ್ಪ ಕೊಡವ ಕೇರಿಯ ಮುಂದಾಳತ್ವದಲ್ಲಿ ಇನ್ನಿತರ 11 ಕೊಡವ ಕೇರಿಗಳ ನಡುವೆ ಬೊಳಕಾಟ್, ಕೋಲಾಟ್, ಪರೆಯಕಳಿ, ಉಮ್ಮತ್ತಾಟ್, ಕಪ್ಪೆಯಾಟ್, ವಾಲಗತಾಟ್‍ನಂತಹ ವಿವಿಧ ಜನಪದೀಯ ಸ್ಪರ್ಧೆಗಳು ಪೈಪೋಟಿಯುತವಾಗಿ ಜರುಗಿದವು.

ಆಯಾ ಕೇರಿಯ ಸದಸ್ಯರು ತಮ್ಮ ತಮ್ಮ ತಂಡವನ್ನು ಹುರಿದುಂಬಿಸುತ್ತಿ ದ್ದುದು ಕಂಡುಬಂತು. ಅಪರಾಹ್ನ ಬೋಜನದ ಬಳಿಕ ಕೆಲ ಹೊತ್ತಿನ ಬಿಡುವಿನಲ್ಲಿ ಪುರುಷರು-ಮಹಿಳೆಯರು ಅಬಾಲವೃದ್ಧರಾಗಿ ವಾಲಗದ ನಿನಾದಕ್ಕೆ ಸಾಮೂಹಿಕವಾಗಿ ಹೆಜ್ಜೆ ಹಾಕಿ ಗಮನ ಸೆಳೆದರು.ಅಂತರ ಕೇರಿಗಳ ನಡುವೆ ಸ್ಪರ್ಧಾಯುತವಾಗಿ ವಿವಿಧ ಪೈಪೋಟಿಗಳು ನಡೆದರೆ ಈ ವಾಲಗತಾಟ್‍ನ ಮೂಲಕ ಎಲ್ಲರೂ ಒಂದಾಗಿ ಸಂಭ್ರಮಿಸಿದಂತಿತ್ತು.ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಈ ಹಿಂದಿನ ಪದ್ಧತಿಯಂತೆ, ಚೆಂಬಿನಲ್ಲಿ ನೀರು, ಟವಲ್ ನೀಡಿ ‘ಬಂದಿರಾ’ ಎಂದು ಸ್ವಾಗತಿಸಿ ಒಡ್ಡೋಲಗ ಸಹಿತ ವೇದಿಕೆಗೆ ಕರೆ ತರಲಾಯಿತು.

ಕನ್ನಂಡ ಕವಿತಾ, ಕನ್ನಂಡ ಸಂಪತ್ ತಂಡದ ಪ್ರಾರ್ಥನೆ, ಉಪಾಧ್ಯಕ್ಷ ಶಾಂತೆಯಂಡ ಸನ್ನಿ ಪೂವಯ್ಯ ಸ್ವಾಗತ, ಕಾರ್ಯದರ್ಶಿ ಸುಧಾ ಬೊಳ್ಳಪ್ಪ ವಂದಿಸಿದರೆ ಮಾದೇಟಿರ ಬೆಳ್ಯಪ್ಪ ಹಾಗೂ ಚೋಕಿರ ಅನಿತಾ ಕಾರ್ಯಕ್ರಮ ನಿರ್ವಹಿಸಿದರು.

ಕುಣಿಸಿದಳು... ‘ಬೊಳ್ಳವ್ವ’

ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ ಎಂಬಂತೆ ಅಧಿಕ ಸಂಖ್ಯೆಯಲ್ಲಿ ಜನಾಂಗದವರು ದಿನವಿಡೀ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸಂಜೆ ನಡೆದ ಸಾಂಸ್ಕøತಿಕ ರಂಗು ಕೇರಿ ಮೇಳಕ್ಕೆ ಇನ್ನಷ್ಟು ರಂಜನೆ ನೀಡಿತು. ವಿವಿಧ ಕೇರಿಗಳ ಮಹಿಳಾ ಸದಸ್ಯರು, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯರಿಂದ ವಿವಿಧ ನೃತ್ಯ ಪ್ರದರ್ಶನ ಮೂಡಿಬಂತು.

ಪೊಮ್ಮಕ್ಕಡ ಕೂಟದಿಂದ ಗೆಜ್ಜೆತಂಡ್, ನೇರ್ ಪೆರಿಪವಳೇ... ನೃತ್ಯ, ಸುಬ್ರಹ್ಮಣ್ಯಕೇರಿ, ಜನರಲ್ ತಿಮ್ಮಯ್ಯ ಶಾಲೆ, ಇಗ್ಗುತಪ್ಪ ಕೇರಿ, ಮುತ್ತಪ್ಪ ಕೇರಿ ತಂಡದಿಂದ ವಿವಿಧ ನೃತ್ಯ ಪ್ರದರ್ಶನ ಜರುಗಿತು.

ಆರ್ಕೆಸ್ಟ್ರಾ: ಇದಾದ ಬಳಿಕ ಚೆಕ್ಕೇರ ಪಂಚಮ್ ಬೋಪಣ್ಣ, ಪಾಡಿಯಮ್ಮಂಡ ವಾಣಿ, ಬೊಟ್ಟೋಳಂಡ ಆಶಿತಾ ಬೋಪಣ್ಣ ತಂಡದಿಂದ ಜರುಗಿದ ಕೊಡವ ಆರ್ಕೆಸ್ಟ್ರಾ ನೆರೆದಿದ್ದವರಿಗೆ ಮುದ ನೀಡಿತು. ಕಲಾವಿದ ಮಾದೇಟಿರ ಬೆಳ್ಯಪ್ಪ ಅವರೂ ಈ ತಂಡದೊಂದಿಗೆ ಪಾಲ್ಗೊಂಡಿದ್ದರೆ, ಮುತ್ತಪ್ಪ ಕೇರಿಯ ಉಪಾಧ್ಯಕ್ಷ ಸನ್ನಿ ಪೂವಯ್ಯ, ಸುಧಾ ಬೊಳ್ಳಪ್ಪ ಸೇರಿದಂತೆ ಇನ್ನಿತರರು ಜನ ಮನರಂಜಿಸಿದರು.

ಪಂಚಮ್ ಅವರ ಕಂಠ ಸಿರಿಯಲ್ಲಿ ಮೂಡಿ ಬಂದ ನಿಪ್ಪ್‍ನಳೆಪಳ ‘ಬೊಳ್ಳವ್ವ’ ಹಾಡು ಸೇರಿದಂತೆ ವಿವಿಧ ಹಾಡುಗಳಿಗೆ ನೆರೆದಿದ್ದವರು ತಡರಾತ್ರಿಯವರೆಗೂ ಹೆಜ್ಜೆ ಹಾಕುವ ಮೂಲಕ 6ನೇ ವರ್ಷದ ಅಂತರ ಕೇರಿ ಕೊಡವ ಮೇಳಕ್ಕೆ ಸಂಭ್ರಮದ ತೆರೆ ಬಿದ್ದಿತು.

ಕೊಡವ ಸಮಾಜದಲ್ಲಿ ಒಂದು ರೀತಿಯಲ್ಲಿ ಮಡಿಕೇರಿಯಲ್ಲಿ ಜರುಗುವ ದಸರಾ ಕಾರ್ಯಕ್ರಮದ ಮಾದರಿಯಲ್ಲಿ ಸಂಭ್ರಮಾಚರಣೆ ಈ ಬಾರಿ ಕಂಡು ಬಂದಿತು. -ಶಶಿ