ಮಡಿಕೇರಿ, ಅ. 30: ಒಂದು ಕಾಲದಲ್ಲಿ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಲಾಟರಿಯದ್ದೇ ಹವಾ. 10 ರೂ. ಲಾಟರಿ ತೆಗೆದು ಕೋಟ್ಯಾಧಿಪತಿಯಾದವರೂ ಇದ್ದಾರೆ, ಲಾಟರಿಯಿಂದ ಕೋಟ್ಯಾಧೀಶರು ಭಿಕ್ಷುಕರಾಗಿದ್ದುಂಟು.
ರಾಜ್ಯದಲ್ಲಿ ಹಾಗೂ ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಯಾವದೇ ರಾಜ್ಯಕ್ಕೆ ಸೇರಿದ ಲಾಟರಿ ಮಾರಾಟವನ್ನು ನಿಷೇಧಿಸಲಾಗಿದೆ. ಕೇರಳ ರಾಜ್ಯದ ಗಡಿ ಜಿಲ್ಲೆಯಾದ ಕೊಡಗಿನಲ್ಲಿ ಕೇರಳ ಲಾಟರಿ ಮಾರಾಟವೂ ಕದ್ದು-ಮುಚ್ಚಿ ಮಾರಾಟವಾಗುತ್ತಿತ್ತು. ಇದಕ್ಕೆ ಪೊಲೀಸ್ ಇಲಾಖೆ ಬ್ರೇಕ್ ಹಾಕಿದರೂ ಸಹಾ ಜಿಲ್ಲೆಯಲ್ಲಿ ಅಕ್ರಮವಾಗಿ ಲಾಟರಿ ಮಾರಾಟದ ಪ್ರಕರಣಗಳು ವರದಿಯಾಗುತ್ತಲೇ ಇದೆ. ಆದರೆ ಇದೀಗ ಕಳೆದ ಎರಡು ಮೂರು ವರ್ಷಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಾಟರಿ ಸಿಂಗಲ್ ನಂಬರ್ (ಒಂದಂಕಿ ಲಾಟರಿ ಗೆಸ್ಸಿಂಗ್ ನಂಬರ್) ದಂಧೆ ನಡೆಯುತ್ತಲೇ ಇದೆ.
ಸಿಂಗಲ್ ನಂಬರ್ ಆಟ ಹೇಗೆ?
ಲಾಟರಿ ಸಿಂಗಲ್ ನಂಬರ್ (ಗೆಸ್ಸಿಂಗ್ ಲಾಟರಿ) ಈ ಆಟವು ಲಾಟರಿ ಮಾರಾಟ ಮಾಡಿ ಆಡುವದಲ್ಲ. ಪರ್ಯಾಯವಾಗಿ ಪೊಲೀಸ್ ಇಲಾಖೆ ತಿಳಿಯಬಾರದು ಎಂದು ಕೇರಳದಲ್ಲಿ ಪ್ರಕಟಗೊಳ್ಳುವ ಲಾಟರಿಯಲ್ಲಿನ ಕೊನೆಯ ಮೂರು ಅಂಕಿಯನ್ನು ಇಲ್ಲಿ ಬಹುಮಾನದ ನಂಬರ್ ಆಗಿ ಘೋಷಣೆ ಮಾಡುತ್ತಾರೆ.
ಈ ಗೆಸ್ಸಿಂಗ್ ನಂಬರ್ 100 ರೂ.ಗೆ ಒಬ್ಬ ಬರೆದರೆ, 05 ಪೀಸ್ ಲೆಕ್ಕ, 100 ರೂಗೆ ಪ್ರಥಮ ಬಹುಮಾನ 25 ಸಾವಿರ ಹಾಗೂ ದ್ವಿತೀಯ ಬಹುಮಾನ 2 ಸಾವಿರ ರೂ. ಹೀಗೆ ಗೆಸ್ಸಿಂಗ್ ನಂಬರ್ ಲಾಟರಿ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ.
ಸೊನ್ನೆಯಿಂದ ಆರಂಭಗೊಂಡು (000) ಒಂಭತ್ತು ನೂರ ತೊಂಬತ್ತೊಂಬತ್ತು (999)ವರೆಗೆ ಗೆಸ್ಸಿಂಗ್ ನಂಬರ್ ಅನ್ನು ಬರೆಯುತ್ತಾರೆ. ಕೆಲವು ಆಟೋ ಚಾಲಕರು ಗೆಸ್ಸಿಂಗ್ ನಂಬರ್ ಏಜೆಂಟ್‍ರಂತೆ ವ್ಯವಹರಿಸುತ್ತಿದ್ದಾರೆ. ಒಬ್ಬ ಏಜೆಂಟ್‍ಗೆ 100 ರೂ.ಗೆ ಐದು ರೂಪಾಯಿ ಅಂತೆ ಕಮಿಷನ್ ನೀಡುತ್ತಿದ್ದಾರೆ.
ಒಂದೇ ಸ್ಥಳದಲ್ಲಿ ಗೆಸ್ಸಿಂಗ್ ಲಾಟರಿ ಬರೆಸಿಕೊಳ್ಳಲು 10- 15 ಜನ ಏಜೆಂಟರನ್ನು ಇದನ್ನು ನಡೆಸುವ ಮಾಲೀಕರು ಬಳಸುತ್ತಿದ್ದಾರೆ. ಅಲ್ಲದೇ ಒಬ್ಬ ಏಜೆಂಟ್ ಕನಿಷ್ಟ ದಿನಕ್ಕೆ 15 ರಿಂದ 25 ಸಾವಿರವರೆಗೆ ಲಾಟರಿ ಗೆಸ್ಸಿಂಗ್ ನಂಬರ್ ಅನ್ನು ಜನರಿಂದ ಬರೆಸಿಕೊಳ್ಳುತ್ತಾನೆ.
ಈ ಲಾಟರಿ ಸಿಂಗಲ್ ನಂಬರ್ ದಂಧೆಗೆ ಬಲಿಯಾಗಿ ಹಲವು ಕುಟುಂಬಗಳು ಬಲಿಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಕಡಿವಾಣ ಹಾಕಬೇಕಾಗಿದೆ.
ಮನೆ ನಿರ್ಮಿಸಲು ಕೂಡಿಟ್ಟ ಹಣ ಗೆಸ್ಸಿಂಗ್ ನಂಬರ್‍ಗೆ
ತನ್ನ ಮನೆ ನಿರ್ಮಿಸಲು ಕೂಡಿಟ್ಟ ಹಣವನ್ನು ಗೆಸ್ಸಿಂಗ್ ನಂಬರ್ ಲಾಟರಿ ಆಟಕ್ಕೆ ಬಳಸಿಕೊಂಡ ವ್ಯಕ್ತಿಯೊಬ್ಬರು ತನ್ನ ಮನೆಯ ಕೆಲಸವೇ ಅರ್ಧದಲ್ಲೇ ನಿಲ್ಲಿಸಿದ ಘಟನೆಯೂ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೆ ಕೆಲವು ಗಂಡಸರು ತಮ್ಮ ಪತ್ನಿ ಮಕ್ಕಳ ಚಿನ್ನಾಭರಣವನ್ನು ಅಡವಿಟ್ಟು ಈ ಲಾಟರಿ ಸಿಂಗಲ್ ಆಟ ಆಡಿದ್ದಾರೆ.
ದಿನಕ್ಕೆ ಮೂರು ಲಕ್ಷ ರೂಪಾಯಿ
ಹದಿನೈದಕ್ಕೂ ಹೆಚ್ಚು ಏಜೆಂಟರನ್ನು ಬಳಸಿ ಸಿಂಗಲ್ ನಂಬರ್ ನಡೆಸುವವರು ಕನಿಷ್ಟ ದಿನಕ್ಕೆ ಮೂರು ಲಕ್ಷ ಹಣವನ್ನು ಪಡೆಯುತ್ತಿದ್ದಾರೆ. ಒಂದು ವಾರ ಯಾರಿಗೂ ಕೂಡ ಬಹುಮಾನ ಬಾರದೆ ಇದ್ದರೆ ಲಾಟರಿ ಸಿಂಗಲ್ ನಂಬರ್ ನಡೆಸುವವರಿಗೆ ಲಕ್ಷಗಟ್ಟಲೆ ಆದಾಯ ಬರುತ್ತದೆ.
ದಿನಕ್ಕೆ 25 ಸಾವಿರ ರೂ.ಗೆ ಸಿಂಗಲ್ ನಂಬರ್ ಲಾಟರಿಯನ್ನು ಬರೆಯುವ ಜನರು ಕೂಡ ಇದ್ದಾರೆ. ಕೆಲವು ಏಜೆಂಟರು ತಮ್ಮ ವೃತ್ತಿಯನ್ನು ಈ ಲಾಟರಿ ಸಿಂಗಲ್ ದಂಧೆಯಾಗಿಸಿದ್ದಾರೆ. ತಮ್ಮ ಬಳಿ ಬರೆದ ಗ್ರಾಹಕರಿಗೆ ದಿನವು ಫಲಿತಾಂಶವನ್ನು ಮೆಸೇಜ್ ಮೂಲಕ ರವಾನಿಸುತ್ತಾರೆ.
ಮಧ್ಯಾಹ್ನ ಎರಡು ಗಂಟೆಗೆ ಸಿಂಗಲ್ ನಂಬರ್ ಬರಹ ಲಾಸ್ಟ್. ಬೆಳಗ್ಗೆ ಆರಂಭಗೊಂಡು ಮಧ್ಯಾಹ್ನ ಎರಡು ಗಂಟೆಯೊಳಗೆ ಏಜೆಂಟರು ತಮ್ಮ ಮಾಲೀಕರಿಗೆ ತಮ್ಮ ಬಳಿ ಬರೆದ ಸಂಖ್ಯೆ ಹಾಗೂ ಜನರ ಮಾಹಿತಿ ನೀಡುತ್ತಾರೆ. ಮೂರು ಗಂಟೆಗೆ ಕೇರಳ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶಕ್ಕಾಗಿಯೇ ಕೆಲವರು ಕಾಯುತ್ತಿರುತ್ತಾರೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ