ವೀರಾಜಪೇಟೆ: ಇಲ್ಲಿನ ಕರ್ನಾಟಕ ಸಂಘದ ವತಿಯಿಂದ 64ನೇ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ನ. 1 ರಂದು ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ಸಂಘದಲ್ಲಿ ಧ್ವಜಾರೋಹಣ ನೆರವೇರಲಿದೆ. ತಾ. 2 ರಂದು ಇಲ್ಲಿನ ಪುರಭವನದಲ್ಲಿ ರಾಜ್ಯೋತ್ಸವದ ಅಂಗವಾಗಿ ಹಲವು ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಉದ್ಘಾಟನೆಯನ್ನು 10.30 ಕ್ಕೆ ವೀರಾಜಪೇಟೆ ಪ್ರಗತಿ ಶಾಲೆಯ ಪ್ರಾಂಶುಪಾಲೆ ಮಾದಂಡ ತುಂಗಾ ಪೂವಯ್ಯ ನಡೆಸಲಿದ್ದಾರೆ.

ಸಭಾ ಕಾರ್ಯಕ್ರಮ 11 ಗಂಟೆಗೆ ನಡೆಯಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ. ಬೆಲ್ಲು ಬೋಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಡಾ. ವಿಶ್ವನಾಥ್ ಶಿಂಪಿ ಹಾಗೂ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ವೈದ್ಯಕೀಯ ಮತ್ತು ಜಾನಪದ ಕ್ಷೇತ್ರ ಸಂಬಂಧ ಡಾ. ಕಾಳಿಮಾಡ ಶಿವಪ್ಪ, ಮಾಜಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಬುಟ್ಟಿಯಂಡ ಎ. ಚಂಗಪ್ಪ, ಪರಿಸರ ಕಾಳಜಿ ಸಂಬಂಧ ಬಲ್ಲಡಿಚಂಡ ಗಿರಿ ನಂಜಪ್ಪ, ವಿದ್ಯಾ ಕ್ಷೇತ್ರದಲ್ಲಿ ಎ.ವಿ. ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಗುತ್ತದೆ.

ಚೆಟ್ಟಳ್ಳಿ: ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಣೆ ಮಾಡಲು ಸಮಿತಿ ಪದಾಧಿಕಾರಿಗಳು ಮುಂದಾಗಿದ್ದಾರೆ.

ಚೆನ್ನಯ್ಯನಕೊಟೆ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ನವೆಂಬರ್ 3 ರಂದು ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನ. 3 ರಂದು ಬೆಳಿಗ್ಗೆ ಹತ್ತು ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಹನ್ನೊಂದು ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗೆ, ಸಾರ್ವಜನಿಕರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದ್ದು, ದಾನಿಗಳು, ಸಮಾಜ ಸೇವಕರು, ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಮುಖ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

ಸೋಮವಾರಪೇಟೆ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ. 1 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ತಹಶೀಲ್ದಾರ್ ಆರ್. ಗೋವಿಂದರಾಜ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ರಮ್ಯಾ ಕರುಣಾಕರ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ವೈ.ಕೆ. ಜಗದೀಶ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಬಿ. ಸತೀಶ್ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಡಿಕೇರಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

‘ಕನ್ನಡದ ಅನಿವಾರ್ಯತೆ-ಇಂಗ್ಲೀಷಿನ ಅವಶ್ಯಕತೆ’ ಎಂಬ ವಿಷಯದ ಕುರಿತ ಂ4 ಹಾಳೆಗಳಲ್ಲಿ 4 ಪುಟ ಮೀರದಂತೆ ಬರೆದ ಪ್ರಬಂಧಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕು. ಅತ್ಯುತ್ತಮವಾದ 3 ಪ್ರಬಂಧಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿಯ ಅಧ್ಯಕ್ಷ ಪಿ.ಪಿ. ಸುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಬಂಧಗಳನ್ನು ನ. 15 ರೊಳಗೆ ರವಿಕೃಷ್ಣ ಪಿ.ಎಸ್., ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಮೂರ್ನಾಡು ಹೋಬಳಿ ಘಟಕ, ಭಾರತಿ ಸಂ.ಪ.ಪೂ. ಕಾಲೇಜು, ಮರಗೋಡು ಅಂಚೆ, ಮಡಿಕೇರಿ ತಾಲೂಕು-571 252 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ. 9481213920 ಸಂಪರ್ಕಿಸಬಹುದು.