ಶ್ರೀಮಂಗಲ, ಅ. 30: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ನೆಲೆಸಿರುವ 74 ಪರಿಶಿಷ್ಟ ಕುಟುಂಬ ಗಳಿಗೆ ನಿವೇಶನದೊಂದಿಗೆ ಮನೆ ನಿರ್ಮಾಣದೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಹುದಿಕೇರಿ ಗ್ರಾ.ಪಂ. ಕಚೇರಿ ಎದುರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಎಂಬ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಅವರ ನೇತೃತ್ವದಲ್ಲಿ ಮಹಿಳೆಯರು ಸೇರಿದಂತೆ ನೂರಾರು ದಲಿತರು ಹುದಿಕೇರಿ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರಾ.ಪಂ. ಕಚೇರಿ ಎದುರು ಧರಣಿ ನಡೆಸಿದರು. ಹೈಸೊಡ್ಲೂರು ಗ್ರಾಮದ ಸರ್ವೆ ನಂಬರ್ 181/1ಪಿ1 ಜಾಗದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಜನರಿಗೆ ಕುಡಿಯುವ ನೀರು ಹಾಗೂ ಮೂಲಭೂತ ಸೌಲಭ್ಯ ಒದಗಿಸುವದು, ಜಾಗವು ಪೆÇನ್ನಂಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಹೆಸರಿನಲ್ಲಿದ್ದು, ಇದನ್ನು ಸರ್ಕಾರ ವಶಪಡಿಸಿಕೊಂಡು ಈ ಗ್ರಾಮದಲ್ಲಿ ವಾಸಿಸುತ್ತಿರುವ ಭೂರಹಿತ ದಲಿತರಿಗೆ ತಲಾ 5 ಸೆಂಟಿನಂತೆ ನಿವೇಶನದ ಹಕ್ಕುಪತ್ರ ವಿತರಿಸಬೇಕು. ಈ ಗ್ರಾಮದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ 74 ಕುಟುಂಬದಲ್ಲಿ 25ಕ್ಕೂ ಹೆಚ್ಚು 1 ರಿಂದ 6 ವರ್ಷದ ಮಕ್ಕಳಿದ್ದು, ಅವರಿಗೆ ಅಂಗನವಾಡಿ ಕೇಂದ್ರ ಸ್ಥಾಪಿಸಬೇಕು. ಅಲ್ಲದೇ 74 ಕುಟುಂಬದ ಸದಸ್ಯರಿಗೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಬಿ.ಪಿ.ಎಲ್ ರೇಷನ್ ಕಾರ್ಡ್ ಹಾಗೂ ಪರಿಶಿಷ್ಟ ಜಾತಿಯವರಿಗೆ ಸಿಗುವ ಪೌಷ್ಟಿಕ ಆಹಾರ ವಿತರಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಹೈಸೊಡ್ಲೂರು ಗ್ರಾಮದಲ್ಲಿ ನೆಲೆಸಿರುವ 74 ದಲಿತ ಕುಟುಂಬಗಳಿಗೆ ಹುದಿಕೇರಿ ಗ್ರಾ.ಪಂ. ಅನುಮತಿ ಪಡೆದು ಪೆÇನ್ನಂಪೇಟೆ ರಾಮಕೃಷ್ಣ ಆಶ್ರಮದ ನೆರವಿನಿಂದ 2 ಶೌಚಾಲಯ ನಿರ್ಮಿಸಲಾಗಿದೆ. ಆದರೆ ದಲಿತ ಸಂಘರ್ಷ ಸಮಿತಿಯಿಂದ ಇಲ್ಲಿ ಕುಡಿಯುವ ನೀರಿಗಾಗಿ ಬೋರ್ವೆಲ್ ನಿರ್ಮಿಸಲು ಗ್ರಾ.ಪಂ. ಅನುಮತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೀರಾಜಪೇಟೆ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಷಣ್ಮುಗಂ ಅವರು ಪ್ರತಿಭಟನಕಾರರ ಮನವಿ ಸ್ವೀಕರಿಸಿ ಮಾತನಾಡಿ ಈಗಾಗಲೇ ದ.ಸಂ.ಸ ಯಿಂದ ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿ, ಎ.ಸಿ, ತಹಶೀಲ್ದಾರ್ ಅವರಿಗೆ ಕಳುಹಿಸಲಾಗಿದೆ. ಹೈಸೊಡ್ಲೂರು ಗ್ರಾಮದಲ್ಲಿ ಒಂದೆರಡು ವರ್ಷದಿಂದ ಗುಡಿಸಲು ನಿರ್ಮಿಸಿಕೊಂಡು ಕೆಲವು ದಲಿತ ಕುಟುಂಬ ವಾಸಮಾಡುತ್ತಿರು ವದು ಗಮನಕ್ಕೆ ಬಂದಿದೆ. ಇಲ್ಲಿ 8 ಎಕರೆಗಳ ಪೈಕಿ 7 ಎಕರೆ ಜಾಗ ಕಾಫಿ ತೋಟವಾಗಿದ್ದು, ಈ ಜಾಗ 2015ರಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಯವರ ಹೆಸರಿಗೆ ದಾಖಲೆಯಾಗಿ ರುತ್ತದೆ. ಆದರೆ ಅದಕ್ಕೂ 20 ವರ್ಷ ಹಿಂದೆ ಇಲ್ಲಿ ಕಾಫಿ ತೋಟವಾಗಿರು ವದು ಕಂಡುಬಂದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತ ಕುಟುಂಬಗಳಿಗೆ ಜಾಗ ನೀಡಬೇಕಾಗು ತ್ತದೆ. ಅದಕ್ಕೂ ಮೊದಲು ಅವರು ನಿವೇಶನ ರಹಿತ ಎಂಬ ಬಗ್ಗೆ ಅಧಿಕೃತ ಪಟ್ಟಿಯಲ್ಲಿ ಹೆಸರು ಇರಬೇಕು. ಈ ಸ್ಥಳದಲ್ಲಿ ಏಕಾಏಕಿ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಿಲ್ಲ. ಯೋಜನ ಬದ್ಧವಾಗಿ ಬಡಾವಣೆ ಮಾಡಿ ಎಲ್ಲಾ ಮೂಲಭೂತ ಸೌಕರ್ಯ ನಿರ್ಮಿಸ ಬೇಕಾಗುತ್ತದೆ. ಇದನ್ನು ಸಂಬಂಧಿಸಿದ ಇಲಾಖೆಗಳು ಮಾಡಬೇಕು. ಎಲ್ಲವೂ ನಮ್ಮ ವ್ಯಾಪ್ತಿಯಲ್ಲಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಜನಿಕಾಂತ್, ಹೆಚ್.ಇ. ಶಿವಕುಮಾರ್, ಪಿ.ಜೆ. ಸುಬ್ರಮಣಿ, ಗಿರೀಶ್, ಸತೀಶ್, ಹೆಚ್.ಎನ್ ಕುಮಾರ್ ಮಹಾದೇವ್, ಬೆಳ್ಳೂರು ಕೃಷ್ಣಪ್ಪ ಮತ್ತು ಇತರರು ಹಾಜರಿದ್ದರು. ಪ್ರತಿಭಟನಕಾರರ ಮನವಿ ಪತ್ರವನ್ನು ಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಕಳ್ಳೇಂಗಡ ಸುಧಾ, ಪಿ.ಡಿ.ಓ ಶಫೀಕ್, ಸ್ವೀಕರಿಸಿದರು. ಕುಟ್ಟ ವೃತ್ತ ನಿರೀಕ್ಷಕ ರಾಮರೆಡ್ಡಿ, ಕುಟ್ಟ ಉಪನಿರೀಕ್ಷಕ ಚಂದ್ರ, ಶ್ರೀಮಂಗಲ ಪ್ರಭಾರ ಉಪನಿರೀಕ್ಷಕ ವಸಂತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.