ಗೋಣಿಕೊಪ್ಪ ವರದಿ, ಅ. 30: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊನ್ನಂಪೇಟೆ ಪೊಲೀಸರು, ಆರೋಪಿಯಿಂದ ಮಾಲು ವಶಪಡಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.ಆರೋಪಿ ದೇವರಪುರ ನಿವಾಸಿ ಮುತ್ತು ಆಲಿಯಾಸ್ ಮನು (44)ನನ್ನು ಬಂಧಿಸಿ, ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರಿಪಡಿಸಿ ಕ್ರಮಕೈಗೊಳ್ಳಲಾಗಿದೆ.ಗೋಣಿಕೊಪ್ಪದ ಚಿನ್ನ ಮಳಿಗೆಯೊಂದಕ್ಕೆ ಮಾರಾಟವಾಗಿದ್ದ ಸುಮಾರು 19 ಗ್ರಾಂ ತೂಕದ 70 ಸಾವಿರ ಮೌಲ್ಯದ ಚಿನ್ನದ ಸರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 10 ರಂದು ಪೊನ್ನಂಪೇಟೆ ಜನರಲ್ ತಿಮ್ಮಯ್ಯ ರಸ್ತೆಯ ಮನೆಯಪಂಡ ಸೀತಮ್ಮ ಅವರು ಮನೆಯಲ್ಲಿದ್ದಾಗ ತೆಂಗಿನ ಕಾಯಿ ಕೀಳುವ ಕೆಲಸ ಕೇಳಿಕೊಂಡು ಬಂದು ಸರ ಕಿತ್ತು ಪರಾರಿಯಾಗಿದ್ದ ಈತನನ್ನು ಘಟನೆ ನಡೆದು 18 ದಿನಗಳಲ್ಲಿ ಬಂಧಿಸಲಾಗಿದೆ. ಸೋಮವಾರ ರಾತ್ರಿ ದೇವರಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸರಿಗೆ ಸೆರೆಯಾಗಿದ್ದ ಈತನನ್ನು ವಿಚಾರಣೆ ನಡೆಸಿ ಸರ ಕಳೆದುಕೊಂಡಿದ್ದ ಸೀತಮ್ಮ ಅವರಿಂದ ಪತ್ತೆ ಹಚ್ಚಲು ಪೊಲೀಸರು ಮುಂದಾದರು. ಸೀತಮ್ಮ ಅವರು ದೃಢಪಡಿಸಿದಂತೆ ಹೆಚ್ಚಿನ ವಿಚಾರಣೆ ಮಾಡಿದಾಗ ಗೋಣಿಕೊಪ್ಪದ ಚಿನ್ನ ಮಳಿಗೆಯಲ್ಲಿ ಸರ ಮಾರಾಟ ಮಾಡಿರುವ ಬಗ್ಗೆ ತಿಳಿಸಿದ್ದು, ಮಾಲನ್ನು ವಶಕ್ಕೆ ಪಡೆಯಲಾಯಿತು.ಸೀತಮ್ಮ ಅವರು ಮಾತ್ರ ಮನೆಯಲ್ಲಿ ಇರುವದನ್ನು ಅರಿತುಕೊಂಡು ಸೀತಮ್ಮ ಅವರ ಮನೆಗೆ ಬಂದಿದ್ದ ಆರೋಪಿ ನೀರು ಕೇಳಿದ್ದು, ಸೀತಮ್ಮ ನೀರು ತರಲೆಂದು ಮನೆಯೊಳಗೆ ನುಗ್ಗುವ ಸಂದರ್ಭ ಏಕಾಏಕಿ ಮುನ್ನುಗ್ಗಿ ಸರ ಕಿತ್ತು ಪರಾರಿಯಾಗಿದ್ದ.

ಎಸ್ಪಿ ಡಾ. ಸುಮನಾ ಪಣ್ಣೇಕರ್, ಡಿವೈಎಸ್ಪಿ ಜಯಕುಮಾರ್, ಸಿಐ ರಾಮರೆಡ್ಡಿ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ಪೊಲೀಸ್ ಉಪ ನಿರೀಕ್ಷಕ ಕುಮಾರ್, ಪ್ರೊಬೆಷನರಿ ಪಿಎಸ್‍ಐ ಮೋಹನ್‍ರಾಜ್, ಸಿಬ್ಬಂದಿ ಮನು, ಮಜೀದ್, ಹರೀಶ್ ಕಾರ್ಯಾಚರಣೆಯಲ್ಲಿದ್ದರು.