ಸೋಮವಾರಪೇಟೆ, ಅ. 30: ಜಿಲ್ಲೆಯ ಪ್ರತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಅಂಗಡಿ, ಮುಂಗಟ್ಟು, ಹೊಟೇಲ್‍ಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಂಘಟನೆಯ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಸೇರಿದಂತೆ ಪದಾಧಿಕಾರಿಗಳು ಈ ಬಗ್ಗೆ ಮನವಿ ಸಲ್ಲಿಸಿದ್ದು, ಸರ್ಕಾರದ ಆದೇಶದಂತೆ ಅಂಗಡಿಗಳ ನಾಮಫಲಕದಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಇರಬೇಕಿದ್ದು, ಹಲವಷ್ಟು ಅಂಗಡಿಗಳು ಈ ನಿಯಮವನ್ನು ಗಾಳಿಗೆ ತೂರಿವೆ. ಇಂತಹ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಕರವೇ ತಾಲೂಕು ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್, ಪದಾಧಿಕಾರಿ ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.