ಸೋಮವಾರಪೇಟೆ, ಅ. 29: ಸೋಮವಾರಪೇಟೆ ಪುಷ್ಪಗಿರಿ ಜೇಸಿ ಸಂಸ್ಥೆಯ ವತಿಯಿಂದ ಇಲ್ಲಿನ ನಂಜಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜೇಸಿ 14ರ ವಲಯಾಧ್ಯಕ್ಷ ಜೆಫಿನ್ ಜಾಯ್ ಮಾತನಾಡಿ, ನಾಯಕತ್ವ ಮತ್ತು ವ್ಯವಹಾರಿಕ ಜ್ಞಾನ, ಸಮುದಾಯ ಅಭಿವೃದ್ಧಿ ಕಾರ್ಯಗಳ ವಿಚಾರಗಳನ್ನು ಸಂಸ್ಥೆ ಕಲಿಸಿಕೊಡುತ್ತದೆ ಎಂದರು.

ಜೇಸಿ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್ ಮಾತನಾಡಿ, ಪ್ರತಿವರ್ಷ ಜೇಸಿ ಸಪ್ತಾಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಮಿಲ್ಡ್ರೆಡ್ ಗೋನ್ಸಾಲ್ವೆಸ್, ಹಿರಿಯ ಪತ್ರಕರ್ತ ಸಯ್ಯದ್ ಇರ್ಫಾನ್, ಸಾವಯವ ಕೃಷಿಕ ಬನ್ನಳ್ಳಿ ಸತೀಶ್, ಆಟೋ ಚಾಲಕ ರವೀಶ್ ಕಲ್ಕಂದೂರು, ಪಟ್ಟಣ ಪಂಚಾಯಿತಿ ವಾಹನ ಚಾಲಕ ಜಿ.ಸಿ. ಶೇಖರ್ ಅವರುಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಜೇಸಿರೇಟ್ ಅಧ್ಯಕ್ಷೆ ಸುಮಲತಾ ಪುರುಷೋತ್ತಮ್, ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್, ನಿಕಟಪೂರ್ವ ಅಧ್ಯಕ್ಷ ಕೆ.ಎ. ಪ್ರಕಾಶ್, ವಲಯಾಧಿಕಾರಿ ಮಾಯ ಗಿರೀಶ್, ಕಾರ್ಯಕ್ರಮ ಉಪಾಧ್ಯಕ್ಷ ಎಸ್.ಆರ್. ವಸಂತ್ ಇದ್ದರು.

ಸಂಗೀತದ ರಸದೌತಣ

ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಸ್ಥಳೀಯ ಕಲಾವಿದರಿಂದ ಮೂಡಿಬಂದ ಸಂಗೀತ ಕಾರ್ಯಕ್ರಮ, ರಸದೌತಣ ನೀಡಿತು.

ಸೋಮವಾರಪೇಟೆ ಪಟ್ಟಣ ಸುತ್ತಮುತ್ತಲಲ್ಲಿರುವ ಕೆಲ ಕಲಾವಿದರು, ಗಾಯಕರುಗಳು ಸೇರಿಕೊಂಡು ‘ಲಹರಿ’ ಎಂಬ ತಂಡವನ್ನು ಕಟ್ಟಿಕೊಟ್ಟಿದ್ದು, ಆ ಮೂಲಕ ಗಾಯನ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ತಂಡದಲ್ಲಿ ಮಹದೇಶ್ವರ ಬಡಾವಣೆಯ ಮನೋಹರ್, ಕಿಬ್ಬೆಟ್ಟ ಮಂಜು, ಸಂಪತ್, ಸರಸ್ವತಿ, ರಂಜುಶ್ರೀ ಸಂಗೀತದ ರಸದೌತಣ ನೀಡಿದರೆ, ಸಂಗೀತದ ಪರಿಕರಗಳನ್ನು ಸೋಮವಾರಪೇಟೆಯ ಉಮೇಶ್, ಮಡಿಕೇರಿಯ ಪುನೀತ್, ಜಮೀರ್ ನುಡಿಸುವ ಮೂಲಕ ಹೆಚ್ಚಿನ ರಂಗು ನೀಡಿದರು.