ಸಿದ್ದಾಪುರ, ಅ. 29: ಆಗಸ್ಟ್ ತಿಂಗಳಿನಲ್ಲಿ ಮಹಾಮಳೆಗೆ ಕಾವೇರಿ ನದಿ ಪ್ರವಾಹದಿಂದಾಗಿ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ತೀರದ ನೂರಾರು ಮನೆಗಳು ಮುಳುಗಡೆ ಗೊಂಡ ಸಂದರ್ಭ ಸಂಕಷ್ಟಕ್ಕೆ ಸಿಲುಕಿಗೊಂಡಿದ್ದ ನಿವಾಸಿಗಳನ್ನು ರಕ್ಷಣೆ ಮಾಡಿದ 123 ಮಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ನೆಲ್ಲಿಹುದಿಕೇರಿಯ ಎಸ್‍ಕೆಎಸ್‍ಬಿವಿ ವಿದ್ಯಾರ್ಥಿ ಸಂಘಟನೆಯ ವತಿಯಿಂದ ದಾರುಸ್ಸಲಾಮ್ ಮದರಸ ಆವರಣ ದಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ಬಾರಿಯ ಪ್ರವಾಹಕ್ಕೆ ಸಿಲುಕಿದ ಕುಟುಂಬಗಳನ್ನು ರಕ್ಷಣೆ ಮಾಡಿದವÀರಿಗೆ ಸಂಘಟನೆಯ ವತಿಯಿಂದ ಗುರುತಿಸಿ ಗೌರವಿಸಿರುವದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಾರುಸ್ಸಲಾಮ್ ಮದರಸ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಜಾತಿ ಬೇದ ಮರೆತು ಸಂಕಷ್ಟಕ್ಕೆ ಸಿಲುಕಿಗೊಂಡಿದ್ದ ಮಂದಿಯನ್ನು ರಕ್ಷಿಸಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಕೆ.ಎ ಯಾಕೂಬ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಶ್ಲಾಘನೀಯ. ಮನುಷ್ಯರು ಪರಸ್ಪರ ಅರಿತು ಬದುಕಿದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ವಿ.ಕೆ ಲೋಕೇಶ್ ಮಾತನಾಡಿ, ಕಳೆದೆರಡು ವರ್ಷಗಳಿಂದ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗದ ನದಿ ತೀರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನೂರಾರು ಮನೆಗಳು ಹಾನಿಯಾಗಿದ್ದು, ಇವರಿಗೆ ಸರಕಾರ ಶಾಶ್ವತ ಸೂರು ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಸೋಮವಾರಪೇಟೆ ತಾಲೂಕು ಎಡಿಎಲ್‍ಆರ್ ಷಂಶುದ್ದೀನ್ ಮಾತನಾಡಿ, ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಹಾಮಳೆಗೆ ಹಲವು ಅನಾಹುತಗಳು ಸಂಭವಿಸಿದ್ದು, ಈ ಬಾರಿಯ ಪ್ರವಾಹದಿಂದಾಗಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗದಲ್ಲಿ ನದಿ ತೀರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ಸ್ಥಳೀಯರು ಸಕಾಲಕ್ಕೆ ಸ್ಪಂದಿಸಿ ರಕ್ಷಣೆ ಮಾಡಿರುವದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿದ್ದಾಪುರ ಪಿಎಸೈ ದಯಾನಂದ, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ, ನೆಲ್ಲಿಹುದಿಕೇರಿ ಪಿಡಿಒ ಅನಿಲ್ ಕುಮಾರ್, ಹೊಸ್ಕೇರಿ ಪಿಡಿಒ ಅಬ್ದುಲ್ಲ, ಸಿದ್ದಾಪುರ ಪಿಡಿಒ ವಿಶ್ವನಾಥ್, ನೆಲ್ಯಹುದಿಕೇರಿ ಜಮಾಅತ್ ಅಧ್ಯಕ್ಷ ಒ.ಎಂ. ಅಬ್ದುಲ್ಲ ಹಾಜಿ, ಪ್ರಮುಖರಾದ ಪಿ.ಆರ್. ಭರತ್, ಎ.ಕೆ. ಹಕೀಂ, ಸಹಾಯ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಕೆ.ಎಂ. ಬಶೀರ್ ಹಾಗೂ ನಸೀರ್ ಇದ್ದರು. ನೆಲ್ಯಹುದಿಕೇರಿ ಖತೀಬ್ ಎಂ.ಇ. ಹನೀಫ್ ಫೈಝಿ ಪ್ರಾರ್ಥಿಸಿ, ಎಂ.ಎ. ಅಜೀಜ್ ಸ್ವಾಗತಿಸಿ, ಎಸ್‍ಕೆಎಸ್‍ಬಿವಿ ರಾಜ್ಯ ಸಮಿತಿ ಸದಸ್ಯ ಫರ್ಹಾನ್ ವಂದಿಸಿದರು.