ನೀರು ಪೂರೈಕೆಯಲ್ಲಿ ವ್ಯತ್ಯಯ
ವೀರಾಜಪೇಟೆ, ಅ. 29: ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬೇತರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿರುವ ಮೂಲ ಸ್ಥಾವರ ಕೇಂದ್ರಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವದರಿಂದ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ನೀರು ಪೂರೈಕೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದಲೂ ವಿದ್ಯುತ್ ಸಂಪರ್ಕದಲ್ಲಿ ಅಡಚಣೆ ಉಂಟಾಗುತ್ತಿದ್ದು ಸೆಸ್ಕಾಂ ಅಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ. ಪಟ್ಟಣದ ನಿವಾಸಿಗಳು ಕುಡಿಯುವ ನೀರು ದೊರೆಯದಿರುವದರಿಂದ ಪಟ್ಟಣ ಪಂಚಾಯಿತಿಯನ್ನು ದೂರುತ್ತಿದ್ದಾರೆ. ಬೇತರಿ ಗ್ರಾಮದ ಮೂಲ ಸ್ಥಾವರಕ್ಕೆ ನಿರಂತರ ನೀರು ಪೂರೈಸಲು ಮೂರ್ನಾಡುವಿನಿಂದ ಹಾಗೂ ವೀರಾಜಪೇಟೆಯಿಂದಲೂ ನೇರ ವಿದ್ಯುತ್ ಸಂಪರ್ಕ ಪಡೆಯಲಾಗಿದ್ದರೂ ನೀರು ಪೂರೈಸಲು ಸರಿಯಾಗಿ ವಿದ್ಯುತ್ ಸಂಪರ್ಕ ದೊರೆಯುತ್ತಿಲ್ಲ. ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡರೂ ಬದಲಿ ವ್ಯವಸ್ಥೆಯಾಗಿ ಜನರೇಟರ್ ಬಳಸಲಾಗುತ್ತಿದೆ.
ಜನರೇಟರ್‍ಗೆ ದುಬಾರಿ ವೆಚ್ಚ ತಗಲುವದರಿಂದ ಎಲ್ಲಾ ಸಮಯಗಳಲ್ಲಿ ಇದನ್ನು ಬಳಸಲು ಸಾಧ್ಯವಾಗುತ್ತಿಲ್ಲ. ನೀರಿನ ಶುಲ್ಕದಿಂದ ಬರುವ ಆದಾಯದಿಂದ ನೀರು ಪೂರೈಕೆ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗು ತ್ತಿಲ್ಲವಾದರೂ ಜನರೇಟರ್‍ನ ದುಬಾರಿ ವೆಚ್ಚವನ್ನು ಭರಿಸಿಕೊಂಡು ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ವಿದ್ಯುತ್ ಸಮಸ್ಯೆಯಿಂದ ನೀರು ಪೂರೈಕೆಗೆ ನಿರಂತರ ಅಡಚಣೆ ಉಂಟಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.