ವೀರಾಜಪೇಟೆ, ಅ. 28: ಗುಣಮಟ್ಟದ ಶಿಕ್ಷಣವೆಂಬದು ಬಹು ಸವಾಲಿನ ಸಮಸ್ಯೆಯಾಗಿರುವ ಇಂದಿನ ದಿನಗಳಲ್ಲಿ ಪ್ರೊ. ರಮಣ ಅವರ ಶೈಕ್ಷಣಿಕ ಚಿಂತನೆಗಳಿಗೆ ಸಾಕಷ್ಟು ಪ್ರಸ್ತುತತೆ ಇದೆಯೆಂದು ಸ್ಥಳೀಯ ಜಯಪ್ರಕಾಶ್ ನಾರಾಯಣ ಸ್ಮಾರಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲಾಲ್ ಕುಮಾರ್ ಹೇಳಿದರು.

ಸರ್ವೋದಯ ಶಿಕ್ಷಕರ ತರಬೇತಿ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸರ್ವೋದಯ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಪ್ರೊ. ರಮಣ ಅವರು ಶಿಕ್ಷಣದ ಮೌಲ್ಯಗಳನ್ನು ಬಹಳ ಆಳದಿಂದ ಅರಿತ ಶಿಕ್ಷಣ ತಜ್ಞರಾಗಿದ್ದರು. ಮಹಿಳಾ ಸಬಲೀಕರಣ ಮತ್ತು ಮಹಿಳಾ ಸ್ವಾವಲಂಬನೆ ಕುರಿತು ದೀರ್ಘದೃಷ್ಟಿಯನ್ನು ಇರಿಸಿಕೊಂಡವರಾಗಿದ್ದರು. ಶಿಕ್ಷಕರ ತರಬೇತಿ ಸಂಸ್ಥೆಯಂತಹ ಕೇಂದ್ರಗಳನ್ನು ಸ್ಥಾಪಿಸುವದು ಜಿಲ್ಲೆಯ ಮಟ್ಟಿಗೆ ಅಸಾಧ್ಯದ ಮಾತಾಗಿದ್ದ ಅಂದಿನ ಕಾಲದಲ್ಲಿ ಅವರ ಧ್ಯೇಯ ಮತ್ತು ದೃಢಚಿತ್ತತೆ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮವನ್ನು ಒದಗಿಸಿತು.

ಶಿಕ್ಷಣ ಕ್ಷೇತ್ರವು ಹಿಂದೆಂದಿಗಿಂತಲೂ ನೈತಿಕತೆಯ ಸವಾಲುಗಳನ್ನು ಹೆಚ್ಚಾಗಿ ಎದುರಿಸುತ್ತಿದೆ. ಸೋಲಿನಿಂದ ಹೆಚ್ಚು ಕಲಿಯಲು ಸಾಧ್ಯ ಎಂದು ರಮಣ ಅವರ ಬದುಕು ತೋರಿಸಿದೆ. ಮುಂದಿನ ಪೀಳಿಗೆಗೆ ಭದ್ರ ಬುನಾದಿ ಹಾಕಲು ಶಿಕ್ಷಕರು ಮಾದರಿಯುತ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.

ಮೂರ್ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದರು. ಅವರು ತಮ್ಮ ಉಪನ್ಯಾಸದಲ್ಲಿ, ಪ್ರೊ. ರಮಣ ಅವರು, ಕೊಡಗಿನ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕಾಣಿಕೆಯನ್ನು ನೀಡಿದ ಮಹಾನ್ ವ್ಯಕ್ತಿಯಾಗಿದ್ದರು. ಶಿಕ್ಷಕರು ಗುರಿ ಸಾಧಿಸುವತ್ತ ಸಮಾಜವನ್ನು ಕೊಂಡೊಯ್ಯಬೇಕು ಎಂದರು.

ಸರ್ವೋದಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆ ಬಿ.ವಿ. ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಸರ್ವೋದಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಸೂರ್ಯಕುಮಾರಿ, ಕೋಶಾಧಿಕಾರಿ ವಾಸಂತಿ, ಪ್ರಾಂಶುಪಾಲೆ ವಾಣಿ ಪುಷ್ಪರಾಜ್ ಮಾತನಾಡಿದರು. ಪದ್ಮಲತಾ ಅರುಣ್ ಜೈನ್ ವಂದಿಸಿದರು. ಸುಜಾತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.