ಸೋಮವಾರಪೇಟೆ, ಅ. 28: ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಮಸ್ಯೆಗಳಿಗೆ ತುರ್ತಾಗಿ ಸ್ವಂದಿಸಿ ಉತ್ತಮ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಶುಶ್ರೂಷಕಿಯರು ಮುಂದಾಗಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚಿಸಿ ದರು.

ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಉತ್ತಮ ಚಿಕಿತ್ಸೆಯ ನಿರೀಕ್ಷೆಯಲ್ಲಿ ಬರುವ ರೋಗಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.

ಸರ್ಕಾರದ ಹೊಸ ಮಾರ್ಗ ಸೂಚಿಯಂತೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವರು ಕೆಲಸ ಕಳೆದು ಕೊಳ್ಳಲಿ ದ್ದಾರೆ ಎಂದು ವೈದ್ಯಾಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ ಒಂದೇ ಕುಟುಂಬದ ಹಲವು ಮಂದಿ ಕೆಲಸ ಮಾಡುತ್ತಿ ದ್ದಾರೆ ಅಂತಹವರಲ್ಲಿ ಒಬ್ಬೊಬ ರನ್ನು ಕೈ ಬಿಡುವಂತೆ ಶಾಸಕರು ಸೂಚಿಸಿದರು.

ವಾರದ ರಜೆಯಲ್ಲಿರುವವರು ಮತ್ತು ರಾತ್ರಿ ಪಾಳಿಯಲ್ಲಿರುವವರನ್ನು ಹೊರತು ಪಡಿಸಿ ಉಳಿದ ಎಲ್ಲಾ ವೈದ್ಯರು ದಿನನಿತ್ಯ ಸೇವೆಯಲ್ಲಿರು ವಂತೆ ವೈದ್ಯಾಧಿಕಾರಿ ಶಿವಪ್ರಕಾಶ್ ಅವರಿಗೆ ಹೇಳಿದರು. ಆಸ್ಪತ್ರೆ ಕಟ್ಟಡ ಸೋರುತ್ತಿರುವದರಿಂದಾಗಿ, ಮಳೆಗಾಲದಲ್ಲಿ ತೊಂದರೆಯಾಗಿದೆ. ಕಟ್ಟಡದ ದುರಸ್ತಿ ಕಾರ್ಯ ಆಗಬೇಕಾಗಿದೆ ಎಂದು ವ್ಯೆದ್ಯಾಧಿಕಾರಿ ಗಳು ತಿಳಿಸಿದ ಹಿನ್ನೆಲೆ ಸೋರುತ್ತಿ ರುವ ಕಟ್ಟಡದ ಭಾಗಗಳನ್ನು ವೀಕ್ಷಿಸಿದ ಶಾಸಕರು, ತಕ್ಷಣವೇ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಂಜಿನಿಯರ್‍ಗೆ ಸೂಚಿಸಿದರು.

ದಾದಿಯರ ವಸತಿ ಗೃಹ ಶಿಥಿಲಾವಸ್ಥೆಯಲ್ಲಿದ್ದು, ಸುಣ್ಣ, ಕಾಣದೆ ಹಲವು ವರ್ಷಗಳಾಗಿವೆ. ಈ ಬಗ್ಗೆ ಪರಿಶೀಲಿಸಿ ಎಂದು ಶುಶ್ರೂಷಕಿಯರು ಶಾಸಕರಿಗೆ ಮನವಿ ಮಾಡಿದರು. ಕ್ರಮ ಕೈಗೊಳ್ಳುವದಾಗಿ ಶಾಸಕರು ಭರವಸೆ ನೀಡಿದರು.