ಪೆರಾಜೆ, ಅ. 28: ಬದಲಾಗುತ್ತಿರುವ ಜೀವನಶೈಲಿಗೆ ಸರಿಹೊಂದುವ ಸಮಗ್ರ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಅಗತ್ಯತೆ ಇಂದಿನ ಸಮಾಜಕ್ಕೆ ಇದೆ ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಹೇಳಿದರು. ಪೆರಾಜೆ ಗ್ರಾಮ ಮಟ್ಟದ ಸಂಜೀವಿನಿ ಒಕ್ಕೂಟದ ವತಿಯಿಂದ ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಜೀವನ ಶೈಲಿಯಿಂದ ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಸಂಜೀವಿನಿ ಒಕ್ಕೂಟದ ಕನಕಾಂಬಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ನಿರ್ಮಲಾ ಚಂದ್ರಶೇಖರ್ ವಹಿಸಿದ್ದರು. ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯರಾದ ಉದಯಚಂದ್ರ, ಶೀಲಾ ಚಿದಾನಂದ, ದೇವಕಿ ಉಪಸ್ಥಿತರಿದ್ದರು. ಪೌಷ್ಟಿಕ ಆಹಾರ ಸಪ್ತಾಹ ಆಚರಣೆಯ ಅಂಗವಾಗಿ ಒಕ್ಕೂಟದ ಸದಸ್ಯೆಯರು ತಾವೇ ಮನೆಯಲ್ಲಿ ತಯಾರು ಮಾಡಿ ತಂದಿರುವ ವಿವಿಧ ಬಗೆಯ ಆಹಾರದ ಪ್ರದರ್ಶನ ಮತ್ತು ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಪೆರಾಜೆ ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಆಶಾ ಕೊಳಂಗಯ ಸ್ವಾಗತಿಸಿ, ಹೊದ್ದೆಟ್ಟಿ ದಿವ್ಯ ನಿರೂಪಿಸಿದರು.