ಮಡಿಕೇರಿ, ಅ. 28: ವೀರಾಜಪೇಟೆಯ ಸರ್ವೋದಯ ಬಿ.ಇಡಿ ಕಾಲೇಜು ಮತ್ತು ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಲ್ಲಿ ದುವ್ರ್ಯಸನ ತಡೆಗಟ್ಟುವ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಪ್ರಾಂಶುಪಾಲೆ ಡಾ. ವಾಣಿ ಅಧ್ಯಕ್ಷತೆಯಲ್ಲಿ ನಡೆಯಿತು. ವೀರಾಜಪೇಟೆ ವೃತ್ತ ನಿರೀಕ್ಷಕ ಖ್ಯಾತೆಗೌಡ ಮಾತನಾಡಿ, ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯೊಂದಿಗೆ ಮುಂದೆ ಆದರ್ಶ ಸಮಾಜವನ್ನಾಗಿ ಮಾರ್ಪಡಿಸುವ ಶಕ್ತಿ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಬೇಕು ಎಂದರು. ವೀರಾಜಪೇಟೆ ಪಿಎಸ್ಐ ಮರಿಸ್ವಾಮಿ ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಲ್ಲಿ ಪರಿಸರ ಸಂರಕ್ಷಣೆ ಮತ್ತು ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಬೇಕು. ಕಲಂ 354 ರಂತೆ ಹೆಣ್ಣು ಮಕ್ಕಳನ್ನು ಚುಡಾಯಿಸುವದು ಹಾಗೂ ತಪ್ಪಾಗಿ ನಡೆಸಿಕೊಳ್ಳುವದು ಅಪರಾಧ ಎಂದು ಹೇಳಿದರು.
ಬಿ.ಇಡಿ ಕಾಲೇಜಿನ ಪ್ರಾಧ್ಯಾಪಕ ಗಿರೀಶ್ ಮಾತನಾಡಿ, ಅಫೀಮು, ಗಾಂಜಾ, ಬೀಡಿ, ಸಿಗರೇಟು ಮಾದಕ ದ್ರವ್ಯಗಳನ್ನು ಸೇವಿಸುವವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸರಿದಾರಿಗೆ ತರಬೇಕು ಎಂದರು.