ಮಡಿಕೇರಿ, ಅ. 28: ಮಡಿಕೇರಿಯ ಕೋಟೆ ಆವರಣದಲ್ಲಿರುವ ಎಲ್ಲಾ ಸರಕಾರಿ ಕಚೇರಿಗಳನ್ನು ಈಗಾಗಲೇ ತೆರವುಗೊಳಿಸಲು ಕ್ರಮ ಕೈಗೊಂಡಿದ್ದು; ಅರಮನೆಯ ರಕ್ಷಣೆಗಾಗಿ ರೂ. 8 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈಗಾಗಲೇ ರಾಜ್ಯ ಉಚ್ಚನ್ಯಾಯಾಲಯಕ್ಕೆ ಕರ್ನಾಟಕ ಸರಕಾರದ ಪರವಾಗಿ ವಿವಿಧ ಇಲಾಖೆಗಳಿಂದ ಜಂಟಿ ಪರಿಶೀಲಿಸಿ ಅಗತ್ಯ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಡಿಕೇರಿಯ ಅರಮನೆಯು ಸೇರಿದಂತೆ ಕೋಟೆಯ ಪರಿಸ್ಥಿತಿ ಬಗ್ಗೆ; ಭಾರತೀಯ ಪುರಾತತ್ವ ಇಲಾಖೆಯ ತಾಂತ್ರಿಕ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಭಿಯಂತರರು, ಜಂಟಿಯಾಗಿ ಸರ್ವೆ ನಡೆಸಿದ್ದಾಗಿದೆ; ಈ ಅಧಿಕಾರಿಗಳ ಸಲಹೆ ಪ್ರಕಾರ ಈಗಾಗಲೇ ರೂ. 8 ಕೋಟಿಯ ಕ್ರಿಯಾಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ನೆನಪಿಸಿದರು.

ಕೊಡಗಿನಲ್ಲಿ ನಿರಂತರ ಮಳೆಯಿಂದಾಗಿ ಯಾವದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲದ ಸನ್ನಿವೇಶದ ನಡುವೆ; ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ. ಸೋಮಣ್ಣ ಅವರು ಕೂಡ ಅರಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಗಮನ ಸೆಳೆದರು.

ಅಲ್ಲದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕರ್ನಾಟಕ ಸರಕಾರದಿಂದ ಕಾಮಗಾರಿ ಹಣವನ್ನು ಮಂಜೂರುಗೊಳಿಸಲು ಕ್ರಮ ವಹಿಸಿದ್ದು; ಅರಮನೆ ನವೀಕರಣ ಬಾಬ್ತು ರೂ. 8 ಕೋಟಿಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಹೂಡಿಕೆ ಮಾಡಬೇಕಿದ್ದು; ಸರಕಾರ ಅಗತ್ಯ ಕ್ರಮ ವಹಿಸಲಿದೆ ಎಂದು ಜಿಲ್ಲಾಧಿಕಾರಿ ‘ಶಕ್ತಿ’ಯೊಂದಿಗೆ ನುಡಿದರು.

ಮುಖ್ಯಕಾರ್ಯದರ್ಶಿ ಗಮನಕ್ಕೆ: ತಾವು ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ವಿಜಯ ಭಾಸ್ಕರ್ ಅವರೊಂದಿಗೆ ಮಾತುಕತೆ ನಡೆಸಿರುವದಾಗಿ ವಿವರಿಸಿದ ಅವರು; ನ್ಯಾಯಾಲಯದ ನಿರ್ದೇಶನದಂತೆ ಸರಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ಅನೀಸ್ ಕಣ್ಮಣಿ ಜಾಯ್ ಆಶಯ ವ್ಯಕ್ತಪಡಿಸಿದರು.

ಅಲ್ಲದೆ, ಸರಕಾರ ಹಾಗೂ ಜಿಲ್ಲಾಡಳಿತ ಈಗಾಗಲೇ ಕೋಟೆ ಆವರಣದೊಂದಿಗೆ ಅರಮನೆಯ ರಕ್ಷಣೆಗೆ ಕೈಗೊಂಡಿರುವ ಕ್ರಮದ ಕುರಿತು ಇದೇ ತಾ. 31ಕ್ಕೆ ಉಚ್ಚನ್ಯಾಯಾಲಯದಲ್ಲಿ ಗಮನ ಸೆಳೆಯಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.