ವೀರಾಜಪೇಟೆ, ಅ. 26: ಪ್ರತಿಯೊಬ್ಬ ಮನುಷ್ಯನು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನದಿಂದ ಸಾಧ್ಯ ಎಂದು ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ. ಕೋನಪ್ಪ ಹೇಳಿದರು.

ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪಾಲಿಬೆಟ್ಟದಲ್ಲಿರುವ ಚೆಶೈರ್ ಹೋಮ್ ಕೂರ್ಗ್ ಇವರ ಸಂಯುಕ್ತ ಆಶ್ರಯದಲ್ಲಿ ಚೆಶೈರ್ ಹೋಮ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಎನ್.ವಿ. ಕೊನಪ್ಪ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಜೀವನದ ಗುರಿ ಮುಟ್ಟಬೇಕೆಂದು ಉತ್ತಮ ಶಿಕ್ಷಣ ನೀಡುತ್ತಾರೆ.

ಆದರೂ ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ಸಾಧಿಸಬೇಕಾದ ಜೀವನದ ಗುರಿಯನ್ನೇ ಮರೆತು ಹೋಗುತ್ತಿದ್ದಾರೆ. ಮಕ್ಕಳಿಗೆ ಅಂಗವಿಕಲತೆಯನ್ನು ಶಾಪ ಎಂದು ತಿಳಿಯದೆ ಅದನ್ನು ಸವಾಲಾಗಿ ಸ್ವೀಕರಿಸಬೇಕು. ವಿಶೇಷ ಅಗತ್ಯತೆವುಳ್ಳ ಅನೇಕ ಮಕ್ಕಳು ಕ್ರೀಡೆ ಹಾಗೂ ಇತರ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರುವ ಮೂಲಕ ಸಾಧನೆ ಮಾಡಿ ಪ್ರಶಸ್ತಿಯನ್ನು ಪಡೆದು ಕೊಂಡವರಿದ್ದಾರೆ ಎಂದರು

ಚೆಶೈರ್ ಹೋಮ್ ಅಧ್ಯಕ್ಷೆ ಗೀತಾ ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನಸಿಕ ಆರೋಗ್ಯ ದಿನವನ್ನು 1999 ರಲ್ಲಿ ಮೊದಲ ಬಾರಿಗೆ ಆಚರಿಸಿದ್ದೆವು. ಈ ವರ್ಷ ಮಾನಸಿಕ ಆರೋಗ್ಯ ಸುಧಾರಣೆ ಹಾಗೂ ಆತ್ಮಹತ್ಯೆ ತಡೆ ಎಂಬ ದ್ಯೇಯವಾಕ್ಯದೊಂದಿಗೆ ಆಚರಿಸುತ್ತಿದ್ದು, ಇಂದಿನ ದಿನಗಳಲ್ಲಿ ಜೀವನದ ಶೈಲಿ, ಜೀವನ ಮಟ್ಟ ಉತ್ತಮವಾಗಿದ್ದು, ಮನುಷ್ಯನಲ್ಲಿ ಕೆಲಸದ ಒತ್ತಡಗಳು ಜಾಸ್ತಿಯಾಗಿರುವ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿ, ಅನಿಯಮಿತ ಕಾನೂನುಗಳ ಬಗ್ಗೆ ನೆರವು ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ದಯಾನಂದ, ಚೆಶೈರ್ ಹೋಮ್‍ನ ಉಪಾಧ್ಯಕ್ಷೆ ಪುನೀತಾ ರಾಮಸ್ವಾಮಿ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಖಜಾಂಚಿ ಮುತ್ತು ಬಿದ್ದಪ್ಪ, ಮುಖ್ಯ ಶಿಕ್ಷಕ ಎಸ್.ಸಿ. ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.