ವೀರಾಜಪೇಟೆ, ಅ. 26: ಇಲ್ಲಿನ ಕರ್ನಾಟಕ ಸಂಘದಿಂದ 64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಲ್ಲಾಮಟ್ಟದ ಶಾಲಾ-ಕಾಲೇಜು ಮತ್ತು ಸಾರ್ವಜನಿಕರಿಗೆ ಸ್ಪರ್ಧಾ ಕಾರ್ಯಕ್ರಮಗಳನ್ನು ನ. 2 ರಂದು ಇಲ್ಲಿನ ಪುರಭವನದಲ್ಲಿ ಬೆಳಿಗ್ಗೆ 10.30 ರಿಂದ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗಕ್ಕೆ ಛದ್ಮವೇಶ ಸ್ಪರ್ಧೆಯಲ್ಲಿ ಭಾಗವಹಿಸಲು 1 ಶಾಲೆಯಿಂದ 1 ವಿದ್ಯಾರ್ಥಿ ಹಾಗೂ 1 ವಿದ್ಯಾರ್ಥಿನಿಗೆ ಅವಕಾಶವಿರುತ್ತದೆ. ಪ್ರೌಢ ಶಾಲಾ ವಿಭಾಗಕ್ಕೆ ಕನ್ನಡ ಹಾಡಿನ ನೃತ್ಯ ಸ್ಪರ್ಧೆ ಆಯೋಜಿಸಲಾಗಿದ್ದು 1 ಶಾಲೆಯಿಂದ 6 ವಿದ್ಯಾರ್ಥಿಗಳನ್ನೊಳಗೊಂಡ 1 ತಂಡಕ್ಕೆ ಅವಕಾಶವಿರುತ್ತದೆ. ಕಾಲೇಜು ವಿಭಾಗಕ್ಕೆ ದೇಶಭಕ್ತಿ ಗೀತೆಗಳ ಸಮೂಹ ನೃತ್ಯವಿದ್ದು 1 ಕಾಲೇಜಿನಿಂದ 6 ವಿದ್ಯಾರ್ಥಿಗಳನ್ನೊಳಗೊಂಡ 1 ತಂಡಕ್ಕೆ ಅವಕಾಶವಿರುತ್ತದೆ. ಸಾರ್ವಜನಿಕರಿಗೆ (ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪಿನವರಿಗೂ ಕೂಡ) ಜಾನಪದಗೀತೆ, ಚಲನಚಿತ್ರ ಗೀತೆ ಹಾಗೂ ಕೊಡವ ಹಾಡು ಗಾಯನ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಸಕ್ತರು ತಾ.28 ರ 4 ಗಂಟೆಯ ಒಳಗೆ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸಂಘದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.