ಮಡಿಕೇರಿ, ಅ. 26: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಜಲಸ್ಫೋಟ ಹಾಗೂ ಭೂಕುಸಿತ ದಿಂದ ಎಲ್ಲೆಡೆ ಅಪಾರ ಹಾನಿಯಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದ್ದ ವೇಳೆ ಪ್ರಸಕ್ತ ವರ್ಷದ ಜಲಪ್ರವಾಹ ಸಂದರ್ಭ ತುರ್ತು ಕಾಮಗಾರಿ ನಿರ್ವಹಿಸಿರುವ ಕೊಡಗಿನ ಗುತ್ತಿಗೆದಾರರಿಗೆ, ಈ ಸಾಲಿನಲ್ಲಿ ಬಿಡುಗಡೆಗೊಂಡಿರುವ ಹಣಕ್ಕೆ ಟೆಂಡರ್ ರಹಿತವಾಗಿ ಕಾಯ್ದೆ ನಾಲ್ಕು ‘ಜಿ’ ಅಡಿಯಲ್ಲಿ ಕೆಲಸ ನೀಡುವಂತೆ ಸರಕಾರವನ್ನು ಆಗ್ರಹಿಸಲಾಗಿದೆ.
ನಿನ್ನೆ ಇಲ್ಲಿನ ಸುದರ್ಶನ ಅತಿಥಿ ಗೃಹದಲ್ಲಿ ಸಚಿವರುಗಳಾದ ಕೆ.ಎಸ್. ಈಶ್ವರಪ್ಪ ಹಾಗೂ ವಿ. ಸೋಮಣ್ಣ ಬಳಿ ಈ ಕುರಿತು ಮನವಿ ಮಾಡಿಕೊಂಡ ಗುತ್ತಿಗೆದಾರರು, ಕಳೆದೆರಡು ವರ್ಷಗಳಿಂದ ಕಷ್ಟ ಕಾಲದಲ್ಲಿ ಕಾರ್ಯನಿರ್ವಹಿಸಿರುವ ಸ್ಥಳೀಯ ಗುತ್ತಿಗೆದಾರರಿಗೆ ಇನ್ನು ಹಣ ಬಿಡುಗಡೆಯಾಗಿಲ್ಲವೆಂದು ಅಳಲು ತೋಡಿಕೊಂಡರು. ಬದಲಾಗಿ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದ್ದಾಗಿ ಅಸಮಾಧಾನ ಹೊರಹಾಕಿದರು.
ಪ್ರಸಕ್ತ ಕಾಮಗಾರಿಗಳಿಗೆ ಮತ್ತೆ ಜಿಲ್ಲಾಡಳಿತ ಟೆಂಡರ್ ಕರೆದು ಹೊರಗಿನವರಿಗೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿದ ಇಲ್ಲಿನ ಗುತ್ತಿಗೆದಾರರು, ಟೆಂಡರ್ ಬದಲಿಗೆ ಮುಕ್ತವಾಗಿ ವಿವಿಧ ಕಾಮಗಾರಿಗಳನ್ನು ಈ ಹಿಂದೆ ತುರ್ತು ಕೆಲಸ ನಿರ್ವಹಿಸಿರುವ ಗುತ್ತಿಗೆಯವರಿಗೆ ಮರು ಕಲ್ಪಿಸಬೇಕೆಂದು ಗಮನ ಸೆಳೆದರು.
ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡುವದರೊಂದಿಗೆ, ಕೊಡಗಿನ ಶಾಸಕರುಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಗುತ್ತಿಗೆದಾರರನ್ನು ಸಮಾಧಾನ ಗೊಳಿಸಿದರು.