ಸೋಮವಾರಪೇಟೆ, ಅ. 25: ತಾಲೂಕಿನ ಚಿಕ್ಕತೋಳೂರು ಮತ್ತು ಕೊರ್ಲಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಬೀಡುಬಿಟ್ಟಿರುವ ಚಿರತೆಯ ಸೆರೆಗೆ ಕೊನೆಗೂ ಅರಣ್ಯ ಇಲಾಖೆ ಮುಂದಾಗಿದ್ದು, ಈಗಾಗಲೇ ನಾಯಿಗಳ ಮೇಲೆ ಧಾಳಿ ನಡೆಸಿರುವ ಚಿರತೆಯನ್ನು ಸೆರೆ ಹಿಡಿಯಲು ಇಂದು ಬೋನು ಅಳವಡಿಸಲಾಗಿದೆ.
ನಾಗರಹೊಳೆಯಿಂದ ತಂದಿರುವ ಬೋನನ್ನು ಚಿಕ್ಕತೋಳೂರು ಗ್ರಾಮದ ಬೆಟ್ಟದ ಕೆಳಭಾಗದಲ್ಲಿರುವ ಕಾಫಿ ತೋಟದೊಳಗೆ ಅಳವಡಿಸಲಾಗಿದ್ದು, ಬೋನಿನ ಆಚೆ ಭಾಗದಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿದೆ. ಬೋನಿನ ಮೇಲ್ಭಾಗ ಮತ್ತು ಸುತ್ತಮುತ್ತಲಲ್ಲಿ ಕುರುಚಲನ್ನು ಹಾಕಲಾಗಿದ್ದು, ಚಿರತೆಯ ಸೆರೆಗೆ ಪ್ರಯತ್ನ ನಡೆದಿದೆ.
ಕಳೆದ ನಾಲ್ಕೈದು ತಿಂಗಳಿನಿಂದ ಕೊರ್ಲಳ್ಳಿ, ಚಿಕ್ಕತೋಳೂರು ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ಈಗಾಗಲೇ ಒಂದು ನಾಯಿಯನ್ನು ಹೊತ್ತೊಯ್ದಿದ್ದು, 8 ನಾಯಿಗಳ ಮೇಲೆ ಧಾಳಿ ನಡೆಸಿದೆ.
ಚಿರತೆಯ ಭಯದಿಂದ ಗ್ರಾಮಸ್ಥರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಶಾಲಾ ಕಾಲೇಜಿನ ವಿದ್ಯಾರ್ಥಿಗಳೂ ಸಹ ಭಯದಿಂದಲೇ ತರಗತಿಗೆ ತೆರಳಬೇಕಿದೆ. ಮೊನ್ನೆಯಷ್ಟೇ ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಚಾಲಕನಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಕಾಫಿ ತೋಟದೊಳಗೆ ತೆರಳಿದೆ.
ಈ ಬಗ್ಗೆ ಅರಣ್ಯ ಇಲಾಖೆಯ ಎಸಿಎಫ್ ನೆಹರು, ಆರ್‍ಎಫ್‍ಓ ಶಮಾ ಅವರಿಗೆ ಮಾಹಿತಿ ಒದಗಿಸಿದ್ದು, ಚಿರತೆಯ ಸೆರೆಗೆ ಮುಂದಾಗುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು, ನಾಗರಹೊಳೆಯಿಂದ ಬೋನನ್ನು ತರಿಸಿದ್ದು, ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್, ಅರಣ್ಯ ರಕ್ಷಕ ಭರಮಪ್ಪ, ಚಾಲಕ ನಂದೀಶ್, ಆರ್‍ಆರ್‍ಟಿ ಸಿಬ್ಬಂದಿಗಳಾದ ಯೋಗೇಶ್, ಹರೀಶ್, ನಿಖಿಲ್ ಅವರುಗಳೊಂದಿಗೆ ಸ್ಥಳೀಯ ಗ್ರಾಮಸ್ಥರು ಸಹಕಾರ ನೀಡಿ ತೋಟದೊಳಗೆ ಬೋನನ್ನು ಅಳವಡಿಸಲಾಯಿತು.