ಸುಂಟಿಕೊಪ್ಪ, ಅ. 25: ಸುಂಟಿಕೊಪ್ಪ ನಾಡಕಚೇರಿ ಸಿಬ್ಬಂದಿಗಳ ಕೊರತೆ, ಓಬಿರಾಯನ ಕಾಲದಲ್ಲಿ ನಿರ್ಮಿಸಿದ್ದ ಇಕ್ಕಟ್ಟಾದ ಕಟ್ಟಡ ಶೌಚಾಲಯ ಅಲಭ್ಯತೆಯಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ತೊಡಕುಂಟಾಗಿದೆ.

ಸುಂಟಿಕೊಪ್ಪ ನಾಡಕಚೇರಿಗೆ ಕಂದಾಯದ 9 ಸರ್ಕಲ್ ಸೇರ್ಪಡೆ ಗೊಳ್ಳುತ್ತಿದೆ ಗರ್ವಾಲೆ, ಶಿರಂಗಳ್ಳಿ, ಮಾದಾಪುರ, ಹಟ್ಟಿಹೊಳೆ, ಹಾಡಗೇರಿ, ಕಾಂಡನಕೊಲ್ಲಿ, ಹಾಲೇರಿ, ಕೊಪ್ಪತ್ತೂರು, ಕೆದಕಲ್, 7ನೇ ಮೈಲು, ಹೊರೂರು, ಚೆಟ್ಟಳ್ಳಿ, ಆರ್ ಎಸ್ ಚೆಟ್ಟಳ್ಳಿ, ಪೊನ್ನತ್‍ಮೊಟ್ಟೆ, ಕಂಡಕೆರೆ, ಕಂಬಿಬಾಣೆ, ಮತ್ತಿಕಾಡು, ಅತ್ತೂರು-ನಲ್ಲೂರು, ಕೊಡಗರಹಳ್ಳಿ, ಅಂದಗೋವೆ, ಕಲ್ಲೂರು, ನಾಕೂರು ಶಿರಂಗಾಲ, ಕಾನ್‍ಬೈಲ್, ಹಾದ್ರೆ ಹೆರೂರು, ಹೆರೂರು, ಬೈಚನಳ್ಳಿ, 7ನೇ ಹೊಸಕೋಟೆ, ಉಪುತೋಡು, ತೊಂಡೂರು, ಹರದೂರು, ಗರಗಂದೂರು ಹೊಸತೋಟ, ಕುಂಬೂರು ಗ್ರಾಮಗಳು ಸೇರುತ್ತವೆ.

ಗ್ರಾಮಲೆಕ್ಕಿಗರ ಕೊರತೆ: 9 ಸರ್ಕಲ್‍ಗೆ 9 ಮಂದಿ ಗ್ರಾಮ ಲೆಕ್ಕಿಗರು ಇರಬೇಕಾದ ಸುಂಟಿಕೊಪ್ಪ ನಾಡಕಚೇರಿಯಲ್ಲಿ ಪ್ರಸ್ತುತ 3 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬರು ದೀರ್ಘಾವಧಿ ರಜೆ ಮೇಲೆ ಇದ್ದಾರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತೋರ್ವ ಗ್ರಾಮಲೆಕ್ಕಾಧಿಕಾರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಎರವಲು ಸೇವೆ ಮೇರೆಗೆ ನಿಯೋಜಿಸಲಾಗಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಒಬ್ಬರಿಗೆ 4 ಸರ್ಕಲ್ ಮತ್ತೊಬ್ಬರಿಗೆ 3 ಸರ್ಕಲ್, ಇನ್ನೊಬ್ಬರಿಗೆ 2 ಸರ್ಕಲ್ ವಿಂಗಡಣೆ ಮಾಡಿಕೊಡಲಾಗಿದೆ. ಕುಗ್ರಾಮಗಳು ಸೇರಿದಂತೆ ಕುಂಬಾರ ಗಡಿಕೆ ಗ್ರಾಮಕ್ಕೆ ಬೆಳಿಗ್ಗೆ ತೆರಳಿದರೆ ವಾಪಾಸ್ಸು ಬರಲು ಸಂಜೆಯಾಗುತ್ತದೆ. ಕೆಲಸದ ಒತ್ತಡದಿಂದ ಇರುವ ಗ್ರಾಮಲೆಕ್ಕಿಗರು ಕೆಲಸ ಮಾಡಬೇಕಾದ ಅನಿವಾರ್ಯತೆ ತಲೆದೋರಿದೆ, ಕನಿಷ್ಟ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿರುವ ಗ್ರಾಮಲೆಕ್ಕಿಗರನ್ನಾದರೂ ಇಲ್ಲಿಗೆ ಮತ್ತೆ ವರ್ಗಾಯಿಸಿದರೆ ಸ್ವಲ್ಪ ಮಟ್ಟಿಗೆ ಕೆಲಸ ಭಾರ ಕಡಿಮೆಯಾಗಬಹುದು ಎಂದು 7ನೇ ಹೊಸಕೋಟೆ ಗ್ರಾ.ಪಂ. ಸದಸ್ಯ ಅವಲಕುಟ್ಟಿ ತಿಳಿಸಿದ್ದಾರೆ.

ಇಕ್ಕಟ್ಟಿನ ಕಚೇರಿ: ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾದ ಶಿಥಿಲಾವಸ್ಥೆಯಲ್ಲಿರುವ ನಾಡಕಚೇರಿ ಇಕ್ಕಟ್ಟಾಗಿದ್ದು ಶ್ರೀಸಾಮಾನ್ಯರು ಕೆಲಸದ ನಿಮಿತ್ತ ಬಂದರೆ ಹೊರಗಡೆ ನಿಲ್ಲಬೇಕಾಗಿದೆ. ಮಳೆಗಾಲದಲ್ಲಿ ಮೈ ಒದ್ದೆಯಾಗಬೇಕಾದ ದಯನೀಯ ಪರಿಸ್ಥಿತಿ. 9 ಜನ ಗ್ರಾಮಲೆಕ್ಕಿಗರ ಸ್ಥಾನ ಭರ್ತಿಯಾದರೆ ಸರಿಯಾಗಿ ಕುಳಿತುಕೊಳ್ಳಲು ಈ ಕಚೇರಿಯಲ್ಲಿ ಜಾಗ ಲಭ್ಯವಿರುವದಿಲ್ಲ. ಸಾರ್ವಜನಿಕರ ಸೇವೆಗೆ ಇರುವ ಈ ಕಚೇರಿ ಬಳಿ ಒಂದು ಶೌಚಾಲಯವನ್ನು ನಿರ್ಮಿಸಲಾಗಿದೆ. ಅದು ನಿರುಪಯುಕ್ತಗೊಂಡಿದೆ. ಸಾರ್ವಜನಿಕರು ಶೌಚಾಲಯಕ್ಕಾಗಿ ಪರದಾಡುವ ಪರಿಸ್ಥಿತಿ, ಜಿಲ್ಲಾಧಿಕಾರಿ ಗಳು ವಿಭಾಗೀಯ ಕಂದಾಯ ಅಧಿಕಾರಿಗಳು ಇತ್ತ ಗಮನಹರಿಸಿ ಈ ನಾಡ ಕಚೇರಿಗೆ ಕಾಯಕಲ್ಪವನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ನೀಡುವ ಅಗತ್ಯತೆ ಇದೆ.

ಪ್ರಸ್ತುತ ಸುಂಟಿಕೊಪ್ಪ ನಾಡಕಚೇರಿಯಲ್ಲಿ ಓರ್ವ ನೂತನ ಉಪತಹಶೀಲ್ದಾರ್, ಒಬ್ಬರು ಕಂದಾಯ ಪರಿವೀಕ್ಷಕರು ಹಾಗೂ 11 ಮಂದಿ ಗ್ರಾಮಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ.