ಕೂಡಿಗೆ, ಅ. 25 : ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಆಟೋ ಚಾಲಕ ಹಲ್ಲೆ ನಡೆಸಿದ ಘಟನೆ ಹೆಬ್ಬಾಲೆ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಚಾಲಕ ನಾಗರಾಜು ಮತ್ತು ನಿರ್ವಾಹಕ ನಾಗೇಶ್ ಎಂಬವರ ಮೇಲೆ ಆಟೋ ಚಾಲಕ ಅರುಣ್ ಮತ್ತು ಆತನ ಸಂಗಡಿಗರು ರಾಡ್ ಮತ್ತು ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿದ್ದಾರೆ ಎಂದು ಕುಶಾಲನಗರ ಗ್ರಾಮಾಂತರ ಠಾಣೆಗೆ ಹಲ್ಲೆಗೊಳಗಾದವರು ದೂರು ನೀಡಿದ್ದಾರೆ. ಮತ್ತೊಂದೆಡೆ ಆಟೋ ಚಾಲಕ ಅರುಣ್ ಕೂಡ ಬಸ್ ಚಾಲಕ ಮತ್ತು ನಿರ್ವಾಹಕ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ನೀಡಿದ್ದು ಮೂವರು ಕೂಡ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆ ವಿವರ: ಬೆಟ್ಟದಪುರದಿಂದ ಹೆಬ್ಬಾಲೆಗೆ ಸಾರಿಗೆ ಬಸ್ ಸಂಚರಿಸುತ್ತಿದ್ದ ಸಂದರ್ಭ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಮೇಲೆ ಕೆಸರು ಎರಚಿದೆ. ಸಾರಿಗೆ ಬಸ್ ಹೆಬ್ಬಾಲೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಕೆಸರು ಆ
(ಮೊದಲ ಪುಟದಿಂದ) ಆಟೋಗೆ ಎರಚಿದ ವಿಷಯವಾಗಿ ಬಸ್ ಚಾಲಕ, ನಿರ್ವಾಹಕ ಮತ್ತು ಆಟೋ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತು ಆವೇಶಕ್ಕೆ ತಿರುಗಿ ಹಲ್ಲೆ ನಡೆದಿದೆ.
ಈ ವಿಷಯವಾಗಿ ಆಟೋ ಚಾಲಕ ಅರುಣ್ ಮತ್ತಿತರರು ರಾಡ್ ಮತ್ತು ಕಲ್ಲಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಚಾಲಕ ಮತ್ತು ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತ ತಾನು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಸಂದರ್ಭ ವೇಗವಾಗಿ ಸಂಚರಿಸುತ್ತಿದ್ದ ಬಸ್ನಿಂದಾಗಿ ಆಟೋ ಮೇಲೆ ಕೆಸರು ಎರಚಿದೆ. ಇದರಿಂದ ಆಟೋ ನಿಯಂತ್ರಣ ಕಳೆದುಕೊಂಡು ಅವಘಡ ಉಂಟಾಗುವ ಸಾಧ್ಯತೆಯಿತ್ತು. ಇದನ್ನು ಪ್ರಶ್ನಿಸಲು ತೆರಳಿದ ತನ್ನ ಮೇಲೆ ಚಾಲಕ ಮತ್ತು ನಿರ್ವಾಹಕ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತಪುರ (ಸೂಳೆಕೋಟೆ) ಆಟೋ ಚಾಲಕ ಅರುಣ್ ಪೊಲೀಸರಿಗೆ ಪ್ರತಿ ದೂರು ನೀಡಿದ್ದಾನೆ.
ಇಬ್ಬರ ದೂರನ್ನು ದಾಖಲಿಸಿಕೊಂಡಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಸಾರಿಗೆ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಹೆಬ್ಬಾಲೆ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ ಘಟನೆ ನಡೆಯಿತು. ಹೆಬ್ಬಾಲೆ ಬಸ್ ನಿಲ್ದಾಣಕ್ಕೆ ಆಗಮಿಸುವ ಬಸ್ಗಳನ್ನು ಸುಮಾರು ಮೂರು ಗಂಟೆಗಳ ಕಾಲ ನಿಲುಗಡೆಗೊಳಿಸಿ ಚಾಲಕ ಮತ್ತು ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ದಿನಂಪ್ರತಿ ಕೆಲಸಕ್ಕೆ ತೆರಳುವವರು, ಪ್ರಯಾಣಿಕರು ಬಸ್ ಸಂಚಾರವಿಲ್ಲದೆ, ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಸಾರ್ವಜನಿಕರು, ಪ್ರಯಾಣಿಕರು ಆಕ್ರೋಶಗೊಂಡು ಪತ್ರಿಭಟನೆ ನಡೆಸಲು ಮುಂದಾಗುತ್ತಿದ್ದ ಪರಿಸ್ಥಿತಿಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ನಂತರ ಸಾರಿಗೆ ಬಸ್ಗಳ ಸಂಚಾರವನ್ನು ಆರಂಭಿಸುವಂತೆ ತಿಳಿಸಿದ ನಂತರ ಸ್ಥಗಿತಗೊಂಡಿದ್ದ ಬಸ್ಗಳ ಸಂಚಾರ ಆರಂಭವಾಯಿತು.