ಸೋಮವಾರಪೇಟೆ, ಅ. 25: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗಮಟ್ಟದ ಕ್ರೀಡಾಕೂಟದ ಪ್ರಾಥಮಿಕ ಶಾಲಾ ವಿಭಾಗದ ಷಟಲ್ ಬ್ಯಾಡ್ಮಿಂಟನ್ನಲ್ಲಿ ಪಟ್ಟಣದ ವಿಶ್ವಮಾನವ ಕುವೆಂಪು ಶಾಲೆ ರನ್ನರ್ ಅಪ್ ಆಗಿದೆ.
ಚಿಕ್ಕಮಗಳೂರು ಮತ್ತು ಹಾಸನ ತಂಡದ ವಿರುದ್ಧ ಜಯಗಳಿಸಿ, ಫೈನಲ್ನಲ್ಲಿ ಮೈಸೂರು ತಂಡದ ವಿರುದ್ಧ ಪರಾಜಯಗೊಂಡು ದ್ವಿತೀಯ ಸ್ಥಾನ ಗಳಿಸಿದೆ. ವೈ.ಎಸ್. ಧನ್ಯ, ಮಾನ್ಯ, ಎ.ಎನ್. ಪುಪ್ಪಾಂಜಲಿ, ಅಭಿಶ ಸಿನಿ, ಹೆಚ್.ಆರ್. ಜೀವಿತ ತಂಡದಲ್ಲಿದ್ದರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ತರ ಬೇತಿ ನೀಡಿ ದ್ದಾರೆ. ಮೈಸೂರು ವಿಭಾಗೀಯ ಮಟ್ಟದ ಟೂರ್ನಿಯ ಬ್ಯಾಡ್ಮಿಂಟನ್ನಲ್ಲಿ 4ನೇ ರ್ಯಾಂಕಿಂಗ್ ಪಡೆದಿರುವ ಆಟಗಾರ್ತಿ ವೈ.ಎಸ್. ಧನ್ಯ, ಉಡುಪಿಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ, ಮೈಸೂರು ತಂಡವನ್ನು ಪ್ರತಿನಿಧಿಸಲಿದ್ದಾಳೆ. ಧನ್ಯ ಕುವೆಂಪು ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಯಡೂರು ಗ್ರಾಮದ ಕೃಷಿಕ ವೈ.ಎಸ್. ಸತೀಶ್, ಭಾರತಿ ದಂಪತಿಯ ಪುತ್ರಿ.