ಸಿದ್ದಾಪುರ, ಅ. 25: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿ ಹೊರ ನಡೆದ ಘಟನೆ ನಡೆದಿದೆ.

ವಾಲ್ನೂರು-ತ್ಯಾಗತ್ತೂರು ಗ್ರಾಮಾಭಿವೃದ್ಧಿ ಅಧಿಕಾರಿ ಹೆಚ್.ಎಸ್. ಅನಿಲ್‍ರನ್ನು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿಯಾಗಿ ನೇಮಿಸಲಾಗಿತ್ತು. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಾಭಿವೃದ್ಧಿ ಅಧಿಕಾರಿ ಮೇಲೆ ಕೇಳಿ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತು ಅನಿಲ್ ವಿರುದ್ಧ ಪತ್ರಿಕೆಯಲ್ಲಿ ವರದಿ ಬಂದ ಹಿನ್ನೆಲೆ ಅವರ ಪರ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಪರ ವಹಿಸಿ ಪತ್ರಿಕೆ ಹೇಳಿಕೆ ನೀಡಿದ್ದರು. ಮಾತ್ರವಲ್ಲ ಅವರ ಪರ ವಕಾಲತ್ತು ವಹಿಸಿ ಸಾಮಾಜಿಕ ಜಾಲ ತಾಣದಲ್ಲಿ ಕೂಡ ಮಾತನಾಡಿದ್ದರು. ಇದಕ್ಕಾಗಿ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಲೆಟರ್ ಹೆಡ್ ಬಳಸಿದ್ದರು ಎಂಬ ಆರೋಪವಿದ್ದು, ಈ ಬಗ್ಗೆ ಕೆಲವರು ಪ್ರಶ್ನಿಸಿದ್ದರು.

ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದಂತೆ ಎಲ್ಲಾ ಸದಸ್ಯರು ಅಧ್ಯಕ್ಷರ ನಡೆಯನ್ನು ಖಂಡಿಸಿದರು. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸಂಬಂಧಿ ಸಿದ ವಿಚಾರಕ್ಕೆ ವಾಲ್ನೂರು-ತ್ಯಾಗತ್ತೂರು ಪಂಚಾಯಿತಿ ಲೆಟರ್ ಹೆಡ್ ಬಳಸಿ ದುರುಪಯೋಗ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯ ಯಾವದೇ ಸದಸ್ಯರ ಗಮನಕ್ಕೆ ತಾರದೇ ಈ ರೀತಿ ಮಾಡಿರುವದು ಸಂಶಯಕ್ಕೆ ಎಡೆ ಮಾಡಿದೆ ಎಂದು ಆರೋಪಿಸಿ ಅಧ್ಯಕ್ಷರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಪಂಚಾಯಿತಿ ಉಪಾಧ್ಯಕ್ಷ ಸತೀಶ್, ಸದಸ್ಯರಾದ ಭುವನೇಂದ್ರ, ಅಂಚೆಮನೆ ಸುಧಿ, ಕವಿತ, ಕಮಲಮ್ಮ, ನಳಿನಿ, ಸಲೀಂ, ಜಮೀಲ, ಯಶೋಧಾ, ದಿನೇಶ್ ಹಾಗೂ ಇತರರು ಅಧ್ಯಕ್ಷರ ನಡೆಯನ್ನು ಖಂಡಿಸಿ ಸಭೆಯನ್ನು ಬಹಿಷ್ಕರಿಸಿದರು.