ಮಡಿಕೇರಿ, ಅ. 25: ‘ಜನಪ್ರತಿನಿಧಿ ಆದವರು ಜನರ ನಡುವೆ ಇರಬೇಕು; ಅವರನ್ನು ಜನಸಾಮಾನ್ಯರಿಂದ ದೂರ ಮಾಡಬಾರದು, ನೂತನ ಜಿ.ಪಂ. ಭವನ ಮಡಿಕೇರಿಯಿಂದ ಹೊರಗಿದೆ. ಬಡವರು ಈ ಕಚೇರಿಗೆ ತೆರಳಲು ರಿಕ್ಷಾಕ್ಕೆ ಹಣ ತೆರಬೇಕು. ಇಂತಹ ಕಚೇರಿಯನ್ನು ನಾನು ಪಡೆಯಲಾರೆ; ನಾನು ಜನರ ನಡುವೆ ಇರಬಯಸುವೆ’ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ನೂತನ ಜಿ.ಪಂ. ಭವನ ಕುರಿತು ‘ಶಕ್ತಿ’ಯೊಂದಿಗೆ ಅಸಮಾಧಾನ ತೋಡಿಕೊಂಡಿದ್ದಾರೆ.
ಕೊಡಗು ತಂಪಾಗಿದೆ : ಕೊಡಗಿಗೂ - ಹೆಣ್ಣು ಮಕ್ಕಳಿಗೂ ಅದೇನೂ ನಂಟಿದೆಯೇ ಗೊತ್ತಿಲ್ಲ; ಎಲ್ಲಿ ಹೆಣ್ಣು ಸಂತಸವಾಗಿ ಇರುವಳೋ ಅಲ್ಲಿ ನೆಮ್ಮದಿ ನೆಲೆಸಲಿದೆ; ನನಗೂ ನಾಲ್ವರು ಪುತ್ರಿಯರಿದ್ದಾರೆ; ಹಾಗಾಗಿ ನಾನು ಏಳಿಗೆ ಹೊಂದುತ್ತಿದ್ದೇನೆ. ಇಲ್ಲಿಯೂ ಜಿಲ್ಲಾಧಿಕಾರಿ ಸಹಿತ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಅನೇಕ ಮಹಿಳಾ ಅಧಿಕಾರಿಗಳಿದ್ದಾರೆ; ಹೀಗಾಗಿ ಕೊಡಗು ತಂಪಾಗಿದೆ; ಕೊಡಗಿಗೆ ಒಳ್ಳೆಯದೇ ಆಗುತ್ತಿದೆ, ನಮ್ಮ ಶಾಸಕರಿಗೆ ಸಾಕಾಗಿದೆ! ಈ ಅಧಿಕಾರಿಗಳಿಗೆ ಸೋಮಣ್ಣ ಆನೆಬಲ.
- ಕೆ.ಎಸ್. ಈಶ್ವರಪ್ಪ, ಸಚಿವರು
ಜೋಡೆತ್ತುಗಳು : ಶಾಸಕಮಿತ್ರರಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಜನಸೇವೆಯಲ್ಲಿ ಜೋಡೆತ್ತುಗಳಂತೆ; ವಿಧಾನಸಭೆಯಲ್ಲೂ ಒಳ್ಳೆಯ ಜನಪರ ಕಾಳಜಿಯಿಂದ ನಮಗೂ ಮಾದರಿಯಾಗಿದ್ದಾರೆ. ಕೆಲಸ ಮಾಡುವಲ್ಲಿ ಸಚಿವ ವಿ. ಸೋಮಣ್ಣ ರಾಕ್ಷಸ... ಅಂತೆಯೇ ಮೇಲ್ಮನೆ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಕೊಡಗಿನ ಧ್ವನಿಯಾಗಿದ್ದಾರೆ. ಸೋದರಿ ವೀಣಾ ಮನಸ್ಸು ಮಾಡಿದರೆ ನಾವು ಜಿಲ್ಲೆಯಲ್ಲೂ ‘ನಾಲ್ಕು’ ಆಗುತ್ತೇವೆ. ಅದು ಅವರಿಗೆ ಅರ್ಥವಾಗಿದೆ ಸಾಕು.!
- ಸಚಿವ ಈಶ್ವರಪ್ಪ
ನಾನು ಮಾತನಾಡುವೆ : ಸರಕಾರ ಯಾವದೇ ಇರಲಿ; ಕೊಡಗಿನ ಅಭಿವೃದ್ಧಿಗೆ ಸ್ಪಂದಿಸಬೇಕು; ಇಲ್ಲದಿದ್ದರೆ ನಾನು ಮಾತನಾಡುವೆ, ಯಾವ ಮುಲಾಜು ಇಲ್ಲ.
ಕೆ.ಜಿ. ಬೋಪಯ್ಯ, ಶಾಸಕರು
ಚಂಡಿ... ಚಾಮುಂಡಿ : ವಿಧಾನ ಪರಿಷತ್ತಿನಲ್ಲಿ ಕೊಡಗಿನ ಬಗ್ಗೆ ಮಾತನಾಡುವಾಗ ವೀಣಾ ಅಚ್ಚಯ್ಯ ಚಂಡಿ... ಚಾಮುಂಡಿಯಂತೆ! ಅವರು ದಾಖಲೆ ಸಹಿತ ನನ್ನೊಂದಿಗೆ ಧ್ವನಿಯೆತ್ತುತ್ತಾರೆ. ಇಲ್ಲಿ ನಾವು ಪಕ್ಷಬೇಧ ಮರೆತು ಕೊಡಗಿಗಾಗಿ ಹೋರಾಡುತ್ತಿದ್ದೇವೆ.
-ಎಂ.ಪಿ. ಸುನಿಲ್ ಸುಬ್ರಮಣಿ, ಮೇಲ್ಮನೆ ಸದಸ್ಯರು
ಹಿರಿಯಣ್ಣಾ : ಸದನದಲ್ಲಿ ನಾನು ಮಾತನಾಡುವಾಗಲ್ಲೆಲ್ಲ; ವಿಧಾನ ಪರಿಷತ್ ವಿಪಕ್ಷ ನಾಯಕರಾಗಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹಿರಿಯಣ್ಣನಂತೆ ಎದ್ದು ನಿಂತು ನಮ್ಮ ಧ್ವನಿಯಾಗುತ್ತಿದ್ದರು; ಈಗ ಅವರು ಕೆಳಮನೆ ಶಾಸಕರಾದ ಬಳಿಕ ಮೇಲ್ಮನೆಯಲ್ಲಿ ನಮಗೆ ಧ್ವನಿಯಿಲ್ಲದಾಗಿದೆ.
- ವೀಣಾ ಅಚ್ಯಯ್ಯ, ಎಂಎಲ್ಸಿ