ಮಡಿಕೇರಿ, ಅ. 25: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತಿರುವ ವಾತಾವರಣ ಇನ್ನೂ ನಾಲ್ಕೈದು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮಾಹಿತಿಗಳು ತಿಳಿಸಿವೆ.ಪ್ರಸ್ತುತ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೋಡÀ ಕವಿದ ವಾತಾವರಣದೊಂದಿಗೆ ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಆಗಸ್ಟ್ ತಿಂಗಳಿನಿಂದ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಮಳೆಯ ರಭಸ ಹೆಚ್ಚಾಗಿದ್ದು, ಇದೀಗ ಅಕ್ಟೋಬರ್ ತಿಂಗಳು ಪೂರ್ಣಗೊಳ್ಳುವತ್ತ ತಲಪಿದರೂ ಜಿಲ್ಲೆಯಲ್ಲಿ ಮಳೆಯ ವಾತಾವರಣವೇ ಕಂಡು ಬರುತ್ತಿದೆ. ಬಿಸಿಲಿನ ವಾತಾವರಣಕ್ಕೆ ಜನತೆ ಪರಿತಪಿಸುತ್ತಿದ್ದರೆ; ವಾಯುಭಾರ ಕುಸಿತದ ಪರಿಣಾಮದಿಂದಾಗಿ ಮಳೆ ಮತ್ತಷ್ಟು ಮುಂದುವರಿಯುತ್ತಿರುವದರಿಂದ

(ಮೊದಲ ಪುಟದಿಂದ) ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗು ನಲುಗುತ್ತಿದೆ. ಭತ್ತದ ಕಾಯಿಕಟ್ಟಲೂ ಮಳೆ ಅಡ್ಡಿಯಾಗುತ್ತಿದೆ. ಕಾಫಿ ತೋಟದ ಕೆಲಸ ಕಾರ್ಯಗಳಿಗೂ ಈಗಿನ ವಾತಾವರಣ ತೀವ್ರ ಅಡಚಣೆಯಾಗುತ್ತಿದೆ.

ಕೊಡಗು ಜಿಲ್ಲೆಗಿಂತ ಇತರ ಹಲವೆಡೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆಯಾದರೂ ಕೊಡಗಿನಲ್ಲಿ ನಿರಂತರವಾಗಿ ಸಾಧಾರಣ ರೀತಿಯಲ್ಲಿ ಮಳೆ ಸುರಿಯುತ್ತಿದೆ. ನಿನ್ನೆಯಿಂದ ಗಾಳಿಯೂ ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಗುಡುಗು ಸಹಿತವಾಗಿ ಇದೇ ರೀತಿಯ ಸನ್ನಿವೇಶ ಮುಂದುವರಿ ಯುವ ಸಾಧ್ಯತೆ ಇರುವದಾಗಿ ಹವಾಮಾನ ಇಲಾಖೆಯ ಮಾಹಿತಿ ತಿಳಿಸಿದೆ.