ವೀರಾಜಪೇಟೆ, ಅ. 25: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು ಭಾರೀ ಮಳೆಯ ಪರಿಣಾಮವಾಗಿ ಇಲ್ಲಿನ ಅರಸುನಗರದ ಕೆಳಭಾಗದ ಬೆಟ್ಟ ಪ್ರದೇಶದಲ್ಲಿ ಒಂದು ಮನೆ ನೆಲಸಮಗೊಂಡರೆ ಉಳಿದ ಎರಡು ಮನೆಗಳು ಜಖಂಗೊಂಡಿದ್ದು, ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ.
ಅರಸುನಗರದ ಮಂಜುಳಾ ಎಂಬವರಿಗೆ ಸೇರಿದ ಮನೆ ನೆಲಸಮಗೊಂಡಿದೆ. ಪಕ್ಕದ ಸಿದ್ದು ಎಂಬವರ ಮನೆಯ ಒಂದು ಭಾಗದ ಗೋಡೆ ಕುಸಿದು ಮನೆ ಜಖಂಗೊಂಡರೆ ಇದರ ಕೆಳಗೆ ಒತ್ತಾಗಿದ್ದ ರಮೇಶ್ ಎಂಬವರ ಮನೆಯ ಮೇಲೆ ಗೋಡೆ ಬಿದ್ದುದರಿಂದ ಮೇಲ್ಚಾವಣಿ ಮುರಿದು ಮನೆ ಜಖಂಗೊಂಡಿದೆ. ಮನೆ ನೆಲಸಮಗೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ ವೆನ್ನಲಾಗಿದ್ದು, ಈ ಮೂರು ಮಂದಿ ತಾಲೂಕು ಕಚೇರಿ ಹಾಗೂ ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಮನೆ ಜಖಂಗೊಂಡ ಸ್ಥಳಕ್ಕೆ ಇಂದು ಬೆಳಿಗ್ಗೆ ಅರಸುನಗರ ಕ್ಷೇತ್ರದ ಪಟ್ಟಣ ಪಂಚಾಯಿತಿ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಭೇಟಿ ನೀಡಿ ಪರಿಶೀಲಿಸಿದರು.
ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನ 8 ಗಂಟೆಯವರೆಗೆ ವೀರಾಜಪೇಟೆ ವಿಭಾಗಕ್ಕೆ ಒಟ್ಟು 36.6 ಮಿಲಿಮೀಟರ್ ಮಳೆ (1.4 ಇಂಚುಗಳಷ್ಟು ) ಸುರಿದಿದೆ. ತಾ. 24ರಂದು 28.2 ಮಿ.ಮೀ.ಮಳೆ ಸುರಿದಿತ್ತು. ವೀರಾಜಪೇಟೆ ಸುತ್ತಮುತ್ತಲ ಪ್ರದೇಶವಾದ ಆರ್ಜಿ, ಬೇಟೋಳಿ, ಬಿಟ್ಟಂಗಾಲ, ನಾಂಗಾಲ ವಿವಿಧ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವದಾಗಿ ಗೊತ್ತಾಗಿದೆ.