ಮಡಿಕೇರಿ, ಅ. 25: ಕರ್ನಾಟಕ ಸರಕಾರವು ಕೇಂದ್ರದಿಂದ ವಿಶೇಷ ಅನುದಾನದೊಂದಿಗೆ; ರಾಜ್ಯದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಎಲ್ಲಾ ರೀತಿ ಸ್ಪಂದಿಸಿದ್ದು; ಹಂತ ಹಂತವಾಗಿ ಪುನರ್ವಸತಿಯೊಂದಿಗೆ ಬದುಕು ಕಟ್ಟಿಕೊಡಲಿದೆ ಎಂದು ರಾಜ್ಯ ವಸತಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು. ಕರ್ಣಂಗೇರಿ ಗ್ರಾಮದಲ್ಲಿ ಓರ್ವ ಫಲಾನುಭವಿಯ ಮನೆಯನ್ನು ಉದ್ಘಾಟಿಸಿ; ಇತರ ಮನೆಗಳ ವೀಕ್ಷಣೆ ನಡೆಸಿದ ಸಚಿವರು, ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಆಗುತ್ತಿದೆ ಎಂದು ಸಮರ್ಥನೆ ನೀಡಿದರು.
ರಾಜ್ಯದಲ್ಲಿ ಮಳೆಯ ಅಡ್ಡಿಯಿಂದ ಸಂತ್ರಸ್ತರಿಗೆ ತ್ವರಿತವಾಗಿ ಸ್ಪಂದಿಸಲು ತೊಂದರೆ ಹೊರತು ಆರ್ಥಿಕ ಸಮಸ್ಯೆ ಇಲ್ಲವೆಂದು ಸಚಿವರು ಮಾರ್ನುಡಿದರು.
ರೂ. 1100 ಕೋಟಿ ಕೃಷಿಗೆ : ರಾಜ್ಯದಲ್ಲಿ ರೂ. 1100 ಕೋಟಿ ಹಣವನ್ನು ಕೃಷಿ ಹಾನಿಗಾಗಿ ರೈತರಿಗೆ ಘೋಷಿಸಿದ್ದು; ಈ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ತಲಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಕೊಡಗಿನ ಮಾಕುಟ್ಟ ಹೆದ್ದಾರಿ ಸಹಿತ ಎಲ್ಲ ರಸ್ತೆಗಳು ಸೇರಿದಂತೆ ಗ್ರಾಮೀಣ ಕುಡಿಯುವ ನೀರು, ಕಾಫಿ ಫಸಲು ಸಂಬಂಧ ನೆರವು ಒದಗಿಸುವ ಇಂಗಿತ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಜಾಗ ಒದಗಿಸಲು ಕ್ರಮ : ಜಿಲ್ಲೆಯ ಹೊಳೆದಂಡೆಯ ಸಂತ್ರಸ್ತರಿಗೆ ಬದಲಿ ಜಾಗದೊಂದಿಗೆ ರೂ. 5 ಲಕ್ಷದ ಮನೆಗಳನ್ನು ನಿರ್ಮಿಸಲು ಈಗಾಗಲೇ ಜಿಲ್ಲಾಡಳಿತ ಕ್ರಮಕೈಗೊಳ್ಳಲು ಸೂಚಿಸಿದ್ದು; ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಸರಕಾರದಿಂದ ಹಣದ ಭರವಸೆ ನೀಡಿರುವದಾಗಿ ವಿವರಿಸಿದರು.
ಸಿದ್ದರಾಮಯ್ಯ ವಿರುದ್ಧ ಕಿಡಿ : ಕರ್ನಾಟಕದಲ್ಲಿ ಕಾಂಗ್ರೆಸ್ ಅವನತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಸಭಾ ಮಾಜಿ ಅಧ್ಯಕ್ಷ ಎಸ್. ರಮೇಶ್‍ಕುಮಾರ್ ಕಾರಣರೆಂದು ಟೀಕಿಸಿದ ಸಚಿವರು; ಅನರ್ಹ ಶಾಸಕರ ಬೆಂಬಲಕ್ಕೆ ಬಿಜೆಪಿಯಿದ್ದು; ಅವರಿಗೆ ನ್ಯಾಯಾಲಯದಿಂದ ಜಯ ಲಭಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರಮೋದಿ ಅವರ ಕುರಿತು ಮಾತನಾಡಲು ಸಿದ್ದರಾಮಯ್ಯ ಅವರಿಗೆ ಯಾವ ನೈತಿಕತೆ ಇಲ್ಲವೆಂದು ಕಿಡಿಕಾರಿದ ಅವರು, ವಿಧಾನಸಭಾ ಅಧ್ಯಕ್ಷರ ಬಗ್ಗೆ ಏಕವಚನದಲ್ಲಿ ಟೀಕಿಸಿರುವ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಹಾಗೂ ಸಂತ್ರಸ್ತ ಕುಟುಂಬಸ್ಥರು ಹಾಜರಿದ್ದರು.