ಕುಶಾಲನಗರ, ಅ. 25: ಕುಶಾಲನಗರದ ಕೇರಳ ಸಮಾಜದ ವತಿಯಿಂದ 19ನೇ ವರ್ಷದ ಓಣಂ ಆಚರಣೆ ತಾ. 27 ರಂದು ಪಟ್ಟಣದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೇರಳ ಸಮಾಜದ ಅಧ್ಯಕ್ಷ ಕೆ.ಆರ್. ಶಿವಾನಂದನ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದ ಕಾರಣ ಅದ್ಧೂರಿ ಆಚರಣೆ ಬದಲಾಗಿ ಸರಳವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮಾಜದ ಖಜಾಂಚಿ ಬಿ.ಸಿ. ಆನಂದ್ ಮಾತನಾಡಿ, ಸಮಾಜವು ಪ್ರತಿವರ್ಷ ಓಣಂ ಹಬ್ಬದ ಆಚರಣೆ ನಡೆಸಿಕೊಂಡು ಬರುತ್ತಿದೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯ ಪ್ರವಾಹದಿಂದ ಜನತೆಯು ತೊಂದರೆಗೀಡಾದ ಕಾರಣ ಆಚರಣೆ ಮಾಡಿರಲಿಲ್ಲ. ಈ ವರ್ಷವೂ ಪ್ರವಾಹದಿಂದ ತೊಂದರೆಯಾಗಿದೆಯಾದರೂ ಸರಳವಾಗಿ ಆಚರಣೆ ಮಾಡುವದಕ್ಕೆ ನಮ್ಮ ಸಮಿತಿ ತೀರ್ಮಾನಿಸಿದೆ.
ಕುಶಾಲನಗರದ ಎ.ಪಿ.ಸಿ.ಎಂ. ಎಸ್. ಸಭಾಂಗಣದಲ್ಲಿ ಅಂದು ಬೆಳಿಗ್ಗೆ 10.30 ಗಂಟೆಗೆ ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಕೆ.ಆರ್. ಶಿವಾನಂದನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯೆ ಜಯಲಕ್ಷ್ಮಿ ಚಂದ್ರನ್, ಟೋಪ್ಕೋ ಜ್ಯುವೆಲ್ಲರ್ಸ್ ನಿರ್ದೇಶಕ ಡಿ.ಕೆ. ಅಸ್ಲಾಂ, ಹೊಟೇಲ್ ಉದ್ಯಮಿ ಗಳಾದ ಯು.ಎಂ. ಲಕ್ಷ್ಮಣನ್, ಪ್ರಥಮ ದರ್ಜೆ ಗುತ್ತಿಗೆದಾರ ಕೆ. ಥೋಮಸ್ ಮತ್ತು ಮೂರ್ನಾಡಿನ ಕೆ. ಬಾಬು ಮತ್ತಿತರರು ಪಾಲ್ಗೊಳ್ಳಲಿ ದ್ದಾರೆ ಎಂದು ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದ ನಂತರ ಮಧ್ಯಾಹ್ನ ಓಣಂ ಸದ್ಯ ಭೋಜನ ಕೂಟದ ಬಳಿಕ ಕೆ.ಎಸ್. ಗ್ರೂಪ್ ಮತ್ತು ಸಿನಿ ತಂಡದವರಿಂದ ತಿರುವಾದಿರಕಳಿ, ಮಕ್ಕಳಿಂದ ಹಾಡು, ನೃತ್ಯ, ಛದ್ಮವೇಷ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಜಿ.ಸಿ. ಗೋಪಾಲಕೃಷ್ಣನ್, ಕೆ.ಬಿ. ಬಾಬು ಇದ್ದರು.